ಬಸವಾದಿ ಶರಣರು ಮತ್ತು ಅವರ ವಚನಗಳಲ್ಲಿ ಶಾಂತಿ, ಬದುಕು, ಪರಸ್ಪರ ಗೌರವ, ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ನಾನು ಎನ್ನುವ ಬದಲಾಗಿ ನಾವು ಎನ್ನುವುದನ್ನು ಕಲಿಸಿದ್ದಾರೆ.
ಗದಗ: ಪಾಶ್ಚಾತ್ಯ ದೇಶಗಳಿಗೆ ಶರಣ ತತ್ವಗಳು ಪಸರಿಸಬೇಕು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳಲ್ಲಿ ಶರಣ ತತ್ವಗಳು ಪಸರಿಸಿದರೆ ಯುದ್ಧಗಳು ನಡೆಯುತ್ತಿರಲಿಲ್ಲ ಎಂದು ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ತಿಳಿಸಿದರು.
ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಪದಾಧಿಕಾರಿಗಳಿಗೆ ಸೇವಾ ಹಸ್ತಾಂತರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರು ಮತ್ತು ಅವರ ವಚನಗಳಲ್ಲಿ ಶಾಂತಿ, ಬದುಕು, ಪರಸ್ಪರ ಗೌರವ, ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ನಾನು ಎನ್ನುವ ಬದಲಾಗಿ ನಾವು ಎನ್ನುವುದನ್ನು ಕಲಿಸಿದ್ದಾರೆ ಎಂದರು.ಸಕಲ ಜೀವಿಗಳ ಕ್ಷೇಮ ಬಯಸಿದ್ದಾರೆ. ಇಂತಹ ಶರಣ ತತ್ವಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪಸರಿಸಿದ್ದರೆ ಇಂದು ಯುದ್ಧಗಳು ನಡೆಯುತ್ತಿರಲಿಲ್ಲ. ಯುದ್ಧವನ್ನು ಕೈಬಿಟ್ಟು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದು ನಾನು ಯದ್ಧೋನ್ಮಾದ ದೇಶಗಳಿಗೆ ಮನವಿ ಮಾಡುತ್ತೇನೆ ಎಂದರು.ಪ್ರತಿ ಸೋಮವಾರ ಮಠದಲ್ಲಿ ಜರುಗುವ ಶಿವಾನುಭವ ಕಾರ್ಯಕ್ರಮ ಗಿನ್ನಿಸ್ ದಾಖಲೆ ಪುಸ್ತಕ ಸೇರ್ಪಡೆಗೆ ಅರ್ಹತೆ ಹೊಂದಿದೆ. ರಾಜ್ಯದ ಅನೇಕ ಮಠಗಳು ಶಿವಾನುಭ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸದೇ ಅರ್ಧಕ್ಕೆ ಕೈಬಿಟ್ಟ ಉದಾಹರಣೆಗಳು ಇವೆ. ಆದರೆ ಕಳೆದ 54 ವರ್ಷಗಳಿಂದ ತೋಂಟದಾರ್ಯ ಮಠದಲ್ಲಿ ನಿರಂತರ ಶಿವಾನುಭ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಇಲ್ಲಿ ವೇದಿಕೆ ಮೇಲೆ ಸನ್ಮಾನಿತರು, ಉಪನ್ಯಾಸ ನೀಡಿದವರು ಭವಿಷ್ಯದಲ್ಲಿ ಉಜ್ವಲ ಭವಿಷ್ಯ ಕಂಡಿದ್ದಾರೆ ಎಂದರು.
ಶಿವಾನುಭ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ನಡೆಸಿಕೊಂಡು ಬಂದ ಸಮಿತಿ ಅಧ್ಯಕ್ಷ ಬಾಲಚಂದದ್ರ ಭರಮಗೌಡರ ಮತ್ತು ಸಮಿತಿ ಸದಸ್ಯರಿಗೆ ಅಭಿನಂದನೆಗಳು. ಜತೆಗೆ 2026-27ನೇ ಸಾಲಿನಲ್ಲಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಉಮೇಶ ಪುರದ ಅವರ ಸೇವೆಯೂ ನಿರಾತಂಕವಾಗಿ ನಡೆಯುತ್ತದೆ ಎಂಬ ಭರವಸೆ ಇದೆ ಎಂದರು.ಲಿಂಗಾಯತ ಪ್ರಗತಿಶೀಲ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಉಮೇಶ ಪುರದ ಮಾತನಾಡಿ, ಮಠದ ಹಲವಾರು ಕಾರ್ಯಕಮಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ ಈ ವರ್ಷ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಹೆಮ್ಮೆ ಅನಿಸುತ್ತದೆ. ಲಿಂಗಾಯತ ಪ್ರಗತಿಶೀಲ ಸಂಘವು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಘವಾಗಿದೆ. ಲಿಂ. ಡಾ. ಸಿದ್ಧಲಿಂಗ ಶ್ರೀಗಳು ಪೀಠಾಧಿಪತಿ ಆಗಲು ಸಹ ಲಿಂಗಾಯತ ಪ್ರಗತಿಶೀಲ ಸಂಘವೇ ಮುಖ್ಯ ಕಾರಣವಾಗಿತ್ತು ಎಂದರು.ಸಂಘದ ನಿಕಟಪೂರ್ವ ಅಧ್ಯಕ್ಷ ಬಾಲಚಂದ್ರ ಭರಮಗೌಡರ ಮಾತನಾಡಿದರು. ಸಂಘದ ನೂತನ ಸದಸ್ಯರನ್ನು, ಪತ್ರಕರ್ತ ಶಿವಾನಂದ ಹಿರೇಮಠ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.ಈ ವೇಳೆ ವಿನಾಯಕ ಮಾನ್ವಿ, ಎಸ್.ಎಸ್. ಪಟ್ಟಣಶೆಟ್ಟರ, ಕೊಟ್ರೇಶ ಮೆಣಸಿನಕಾಯಿ, ಸುಧಾ ಹುಚ್ಚನ್ನವರ ಸೇರಿದಂತೆ ಇತರರು ಇದ್ದರು.