ಸಾರಾಂಶ
ಕೂಡ್ಲಿಗಿ: 12ನೇ ಶತಮಾನದಲ್ಲಿ ಮುಂಚೂಣಿ ಶರಣರ ಜತೆಗೆ ಅಸಂಖ್ಯಾತ ಶರಣರು ತಮ್ಮ ಕಾಯಕನಿಷ್ಠೆ, ವಚನಗಳ ಮೂಲಕ ಜನತೆಯನ್ನು ಎಚ್ಚರಿಸಿದ್ದಾರೆ. ತಳಸಮುದಾಯದ ಶರಣರ ವಚನಗಳು, ಅವರ ಜೀವನ ಮೌಲ್ಯಗಳು ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಚಿತ್ತರಗಿ ವಿಜಯಮಹಾಂತೇಶ್ವರ ಶಾಖಾಮಠ ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಸ್ವಾಮಿಗಳು ಹೇಳಿದರು.
ತಾಲೂಕಿನ ಬೆಳ್ಳಗಟ್ಟೆ ಗ್ರಾಪಂ ವ್ಯಾಪ್ತಿಯ ಯರ್ರಲಿಂಗನಹಳ್ಳಿ ಕೊರಚರಹಟ್ಟಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಕೊರಚ ಮಹಾಸಂಘ ಹಾಗೂ ಯರ್ರಲಿಂಗನಹಳ್ಳಿ ಕೊರಚರಹಟ್ಟಿ ನುಲಿಯ ಚಂದಯ್ಯ ಗ್ರಾಮ ಘಟಕ ವತಿಯಿಂದ ಆಯೋಜಿಸಿದ್ದ 12ನೇ ಶತಮಾನದ ಶರಣ ಶ್ರೀ ನುಲಿಯ ಚಂದಯ್ಯ ಶಿಲಾಮೂರ್ತಿ ಹಾಗೂ ಗೋಪುರ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಶರಣ ನುಲಿಯ ಚಂದಯ್ಯ ಹಗ್ಗ ಹೊಸೆಯುವ ಕಾಯಕ ಮಾಡುತ್ತಲೇ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಶರಣನಾದ ಪರಿ ಇಂದಿನ ಯುವಪೀಳಿಗೆ ಆದರ್ಶವಾಗಬೇಕಿದೆ. ನುಲಿಯ ಚಂದಯ್ಯ ಶರಣನ ಬಗ್ಗೆ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ಇಂದಿನ ಮಕ್ಕಳಿಗೆ ಪರಿಚಯ ಮಾಡಿಕೊಡುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದರು.ಅಖಿಲ ಕರ್ನಾಟಕ ಕೊರಚ ಮಹಾಸಂಘದ ಅಧ್ಯಕ್ಷ ಎಚ್.ಎನ್. ರಾಮಚಂದ್ರಪ್ಪ ಮಾತನಾಡಿ, ಕೊರಚ ಸಮುದಾಯ ಕಾಡುಮೇಡುಗಳಲ್ಲಿ ಜೀವನ ನಡೆಸುತ್ತಾ ಬಂದಿದ್ದು, ಇಂದು ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹನಿಗೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೊರಚ ಸಮಾಜ ನಿಕೃಷ್ಟವಾಗಿ ಈ ಹಿಂದೆ ಜೀವನ ಮಾಡುವ ಕಾಲವಿತ್ತು. ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಹೀಗಾಗಿ ವಿದ್ಯಾವಂತರಾಗುವ ಮೂಲಕ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಪಣತೊಡಬೇಕಾಗಿದೆ ಎಂದರು.
ಚಿಕ್ಕುಂತಿ ಮಠದ ಶ್ರೀ ಶಿವಮೂರ್ತಿ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ತಹಸೀಲ್ದಾರ್ ಗಂಗಾವತಿ ಕೆ. ಬಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಗಟ್ಟೆ ಗ್ರಾಪಂ ಅಧ್ಯಕ್ಷೆ ಓಬಮ್ಮ ಓಬಣ್ಣ, ಜಿಪಂ ಮಾಜಿ ಸದಸ್ಯ ಹೊಂಬಾಳೆ ರೇವಣ್ಣ, ಕಾಂಗ್ರೆಸ್ ಮುಖಂಡರಾದ ಎನ್.ಟಿ. ತಮ್ಮಣ್ಣ, ಕೊರಚ ಸಮಾಜದ ಮುಖಂಡರಾದ ಬೆಂಗಳೂರಿನ ಗಂಗಾಧರ, ಬಳ್ಳಾರಿ ಶಿಕ್ಷಕರಾದ ಹನುಮಂತಪ್ಪ, ಚಿತ್ರದುರ್ಗದ ಧನಂಜಯ, ಹರಪನಹಳ್ಳಿ ರಾಮಮೂರ್ತಿ, ನಾಗಪ್ಪ, ಜನಾರ್ದನ, ಸ್ಥಳೀಯ ಕೊರಚ ಸಮಾಜದ ಮುಖಂಡರಾದ ಪರಮೇಶ್ವರಪ್ಪ, ಚಂದ್ರಪ್ಪ, ರಾಘೇಶ್, ಸಣ್ಣರಾಮಪ್ಪ, ಸಾತಪಡಿ ರಾಜಪ್ಪ, ಜನಾರ್ದನ, ಲೋಕೇಶ್, ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಗುರುಶಂಕರಪ್ಪ ಪ್ರಾರ್ಥಿಸಿದರು. ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಲಾವಿದ ರಾಮಸಾಗರಹಟ್ಟಿ ಗುರುಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.