ಸಾರಾಂಶ
ದಾಂಡೇಲಿ: ಯುವ ಜನರನ್ನು ಸಾಹಿತ್ಯದತ್ತ ಸೆಳೆಯುವ ಕೆಲಸವಾಗಬೇಕು ಎಂದು ಉಪನ್ಯಾಸಕ, ಲೇಖಕ ಪ್ರವೀಣ ಜಿ. ನಾಯಕ ನುಡಿದರು.
ಅವರು ದಾಂಡೇಲಿಯ ಸಾಹಿತ್ಯ ಭವನದಲ್ಲಿ ದಾಂಡೇಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ''''''''ಕಾವ್ಯದ ಗೂಡಿನೊಳಗೆ'''''''' ಎಂಬ ಯುವ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಎಲ್ಲವೂ ಎಲ್ಲ ಕಾಲಕ್ಕೂ ಸತ್ಯ ಅಲ್ಲ. ಅದು ಬರವಣಿಗೆಗೂ ಅನ್ವಯಿಸುತ್ತದೆ. ಪುರಾಣಗಳು ಇಂದಿಗೂ ಪ್ರಸ್ತುತವಾಗಬೇಕೆಂದೇನಿಲ್ಲ. ಅದನ್ನು ವಿಮರ್ಶಿಸುವ, ಪರಾಮರ್ಶಿಸುವ ಕೆಲಸ ಇಂದಿನ ಬರಹಗಾರರಿಂದ ಆಗಬೇಕಿದೆ ಎಂದರು.
ಅಂಬೇಡ್ಕರ್ ಸಂವಿಧಾನ ಹಲವು ಬಾರಿ ತಿದ್ದುಪಡಿ ಮಾಡಿದ ಹಾಗೆ ಮನುಸ್ಮೃತಿಯನ್ನು ಏಕೆ ತಿದ್ದುಪಡಿ ಮಾಡಬಾರದು? ಎಂದು ಪ್ರಶ್ನಿಸಿದ ಪ್ರವೀಣ ನಾಯಕ, ಉತ್ತರನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಳಗೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಗಸ್ತು ಅರಣ್ಯ ಪಾಲಕ ಪ್ರವೀಣ ಮ್ಯಾಗೇರಿ ಎಂ. ಸಾಹಿತ್ಯದ ಸಂಘ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ ಎಂದು ಹೇಳಿ ಜಾನಪದ ಗೀತೆ ಹಾಡಿದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಮಾತನಾಡಿ, ಸಾಹಿತ್ಯಕ್ಕೆ ಜಾತಿ ಮತವಿಲ್ಲ. ನಮ್ಮ ಜೀವನಾನುಭವಗಳೇ ಬರಹಗಳಾಗಬೇಕು. ಯುವ ಜನರು ಸಾಹಿತ್ಯದತ್ತ ಹೆಚ್ಚು ಒಲವು ತೋರಿಸಬೇಕು ಎಂದರು. ಯುವ ಪತ್ರಕರ್ತ ಅಕ್ಷಯ ಗೋಸಾವಿ ಸಾಹಿತ್ಯ ಪರಿಷತ್ತಿನ ರಚನಾತ್ಮಕ ಕಾರ್ಯಗಳ ಬಗ್ಗೆ ಶುಭ ಹಾರೈಸಿ ಮಾತನಾಡಿದರು. ಅಧ್ಯಾಪಕಿ ಆಶಾ ದೇಶಭಂಡಾರಿ ಕಾರ್ಯಕ್ರಮದ ಅತಿಥ್ಯ ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಅಭಿನಂದಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕವಿತೆ ಬರೆಯುವ ಹೊಸ ತಲೆಮಾರು ಅಪ್ಪ, ಅಮ್ಮ, ಪ್ರೀತಿ, ಊರು ಈ ಸಂಗತಿಗಳಿಗಷ್ಟೇ ಜೋತು ಬೀಳದೇ ಸಮಾಜದಲ್ಲಿ ನಡೆಯುವ ಸಂಘರ್ಷಗಳ ಬಗ್ಗೆ, ಸಾಮಾಜಿಕ ಅಸಮಾನತೆಗಳ ಬಗ್ಗೆ, ದೌರ್ಜನ್ಯಗಳ ಬಗ್ಗೆ ಬರೆಯುವ ತೀಕ್ಷ್ಣತೆ ಹೊಂದಬೇಕು. ಉರ್ಮಿಳೆ ಪತಿವೃತೆಯಾಗದ ಬಗ್ಗೆ, ಕರ್ಣ ಪಾಂಡವನಾಗದ ಬಗ್ಗೆ ಪ್ರಶ್ನಿಸಿ ಬರೆಯಬೇಕು. ಆ ಮೂಲಕ ಒಂದು ಕವಿತೆ ಆಳುವರಿಗೂ ಬಿಸಿ ಮುಟ್ಟಿಸಲು ಸಾಧ್ಯವಿದೆ. ಸಾಹಿತ್ಯಕ್ಕೆ ಸಮಾಜದ ಕಣ್ತೆರೆಸುವ ಶಕ್ತಿಯಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ದಾಸೋಹಿಗಳಾದ ಕಿಶೋರ ಕಿಂದಳ್ಕರ ಹಾಗೂ ಆಶಾ ದೇಶಭಂಡಾರಿ ಅವರನ್ನು ಕಸಾಪದಿಂದ ಸನ್ಮಾನಿಸಿದರು. ಕಸಾಪ ದಾಂಡೇಲಿ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಸರಣಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಕ್ಷಾ ಕಿಂದಳ್ಕರ ಪ್ರಾರ್ಥಿಸಿದರು. ಕಿಶೋರ ಕಿಂದಳ್ಕರ ಸ್ವಾಗತಿಸಿದರು. ಕಲ್ಪನಾ ಪಾಟೀಲ ವಂದಿಸಿದರು. ಸುರೇಶ ಕಾಮತ ಕವಿಗೋಷ್ಠಿ ನಿರ್ವಹಿಸಿದರೆ, ಎನ್.ಆರ್. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 15ಕ್ಕೂ ಹೆಚ್ಚು ಯುವ ಕವಿಗಳು ತಮ್ಮ ಕವಿತೆ ವಾಚಿಸಿದರು. ಕಸಾಪ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಕೋಶಾಧ್ಯಕ್ಷ ಶ್ರೀಮಂತ ಮದರಿ ಹಾಗೂ ಪದಾಧಿಕಾರಿಗಳು ಸಹಕರಿಸಿದರು.