ಶರಣ ಸಾಹಿತ್ಯದ ಕಾರ್ಯ ಚಟುವಟಿಕೆ ನಿರಂತರವಾಗಿರಲಿ

| Published : Nov 29 2024, 01:04 AM IST

ಶರಣ ಸಾಹಿತ್ಯದ ಕಾರ್ಯ ಚಟುವಟಿಕೆ ನಿರಂತರವಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ, ಶರಣ ಸಾಹಿತ್ಯ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ತಾಯಿಯ ಸೇವೆ ಮಾಡಿರುವುದು ನಮಗೆಲ್ಲ ಮಾದರಿ

ಲಕ್ಷ್ಮೇಶ್ವರ: ಶರಣು ಸಾಹಿತ್ಯ ಪರಿಷತ್ತು ನಾಡಿನಲ್ಲಿ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಿ, ಶರಣರ ಹಾದಿಯಲ್ಲಿ ಸಾಗುವಂತೆ ಯುವಕರಿಗೆ ಮಾರ್ಗದರ್ಶನ ಮಾಡುವ ಅವಶ್ಯಕತೆ ಹೆಚ್ಚಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್‌ ಹೇಳಿದರು. ಬುಧವಾರ ಸಂಜೆ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಗೋ.ರು. ಚನಬಸಪ್ಪ ಕನ್ನಡ ಸಾಹಿತ್ಯದ ಸೇವೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋ.ರು. ಚನಬಸಪ್ಪ ಕನ್ನಡ ಸಾಹಿತ್ಯ,ಶರಣ ಸಾಹಿತ್ಯ ಪರಿಷತ್ತಿನ ವಿವಿಧ ಹುದ್ದೆ ಅಲಂಕರಿಸಿ ಅವುಗಳಿಗೆ ಗೌರವ ತರುವ ಕಾರ್ಯ ಮಾಡಿದ್ದಾರೆ. ಗೋ.ರು.ಚನಬಸಪ್ಪ ವ್ಯಕ್ತಿತ್ವ ನಮಗೆಲ್ಲ ಮಾದರಿಯಾಗಿದೆ. ಅವರನ್ನು ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ.

ಶರಣ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತಮ್ಮ ಕಾರ್ಯ ಚಟುವಟಿಕೆ ನಡೆಸುತ್ತಿದೆ.ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ತೊಡೆದು ಹಾಕಲು ಶರಣು ಸಾಹಿತ್ಯ ಪರಿಷತ್ತು ಸಕ್ರೀಯವಾಗಿದೆ ಎಂದು ಹೇಳಿದರು.

ಈ ವೇಳೆ ಶಿಕ್ಷಕ ಎಂ.ಕೆ. ಲಮಾಣಿ ಗೋ.ರು.ಚನಬಸಪ್ಪ ಕುರಿತು ಉಪನ್ಯಾಸ ನೀಡಿ, ಕನ್ನಡ ನಾಡಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ, ಶರಣ ಸಾಹಿತ್ಯ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ತಾಯಿಯ ಸೇವೆ ಮಾಡಿರುವುದು ನಮಗೆಲ್ಲ ಮಾದರಿಯಾಗಿದೆ. ಕಡು ಬಡತನದಲ್ಲಿ ಜನಿಸಿದ ಗೋ.ರು. ಚನಬಸಪ್ಪ ಕಷ್ಟಪಟ್ಟು ಅಭ್ಯಾಸ ಮಾಡುವ ಮೂಲಕ ಸರ್ಕಾರದ ವಿವಿಧ ಹುದ್ದೆ ಅಲಂಕರಿಸಿ ಅವುಗಳಿಗೆ ಜೀವ ತುಂಬುವ ಕಾರ್ಯ ಮಾಡಿದರು. ಈ ವರ್ಷ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೋ.ರು. ಚನಬಸಪ್ಪ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಈ ವೇಳೆ ಲಕ್ಷ್ಮೇಶ್ವರ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಕ್ಷ್ಮಣಗೌಡ ಅರಳಿಹಳ್ಳಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಸದಾ ನಡೆಯುವಂತೆ ನೋಡಿಕೊಳ್ಳುವ ಮೂಲಕ ಮನೆ ಮನೆಗೆ ಶರಣ ಸಾಹಿತ್ಯ ವಚನಗಳು ಹಬ್ಬುವಂತೆ ಮಾಡೋಣ ಎಂದು ಹೇಳಿದರು.

ಈ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಶರಣರು ಹಾಗೂ ಶರಣಿಯರು, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಕರಿಯಪ್ಪ ಶಿರರಹಟ್ಟಿ, ನಿರ್ಮಲಾ ಅರಳಿ ಇದ್ದರು. ಸೋಮಣ್ಣ ಯತ್ತಿನಹಳ್ಳಿ ಸ್ವಾತಿಸಿದರು. ರೇಖಾ ವಡಕಣ್ಣವರ ನಿರ್ವಹಿಸಿದರು.