ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು-ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಲಿ-ಸಚಿವ ವೈದ್ಯ

| Published : Mar 26 2024, 01:22 AM IST

ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು-ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಲಿ-ಸಚಿವ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣಾ ತಯಾರಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಪೂರ್ವಭಾವಿ ಸಭೆ ಶಿರಸಿ ಸಮೀಪದ ಹುಸುರಿಯ ಪಾಂಡುರಂಗ ಸಭಾಭವನದಲ್ಲಿ ನಡೆಯಿತು.

ಶಿರಸಿ: ಲೋಕಸಭಾ ಚುನಾವಣಾ ತಯಾರಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಪೂರ್ವಭಾವಿ ಸಭೆ ಶಿರಸಿ ಸಮೀಪದ ಹುಸುರಿಯ ಪಾಂಡುರಂಗ ಸಭಾಭವನದಲ್ಲಿ ನಡೆಯಿತು.

ಸಭೆಯನ್ನು ಹಳಿಯಾಳದ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಲು ಕರೆ ನೀಡಿದರು. ಎಂಸಿಎ ಅಧ್ಯಕ್ಷ ಮತ್ತು ಕಾರವಾರದ ಶಾಸಕ ಸತೀಶ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪಕ್ಷದ ಎಲ್ಲರ ಸಹಕಾರ ಕೇಳಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ಕಾಂಗ್ರೆಸ್ ಶಿಸ್ತು ಸಮಿತಿಯ ಸದಸ್ಯ ನಿವೇದಿತ್ ಆಳ್ವ, ಸತೀಶ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕುಮಟಾ ಬ್ಲಾಕ್ ಅಧ್ಯಕ್ಷ ಭುವನ್ ಭಾಗ್ವತ್, ಜಿಲ್ಲೆಯ ಹಿರಿ ಕಿರಿಯ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಬ್ಬಾರ ಸೇರ್ಪಡೆಗೆ ಬಗ್ಗೆ ವಾಗ್ವಾದ: ಸಭೆ ಮುಗಿದು ಎಲ್ಲರೂ ಹೊರಡಲು ಹೊರ ಬಂದಾಗ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರ ಕಾಂಗ್ರೆಸ್ ಸೇರ್ಪಡೆ ವಿಷಯಕ್ಕೆ ಎರಡು ತಂಡದ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಸರಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಬರುವುದಕ್ಕೆ ಕಾರಣರಾದ ಹೆಬ್ಬಾರ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬಾರದು ಎಂದು ಕೆಲವರು ಏರುದನಿಯಲ್ಲಿ ಆಗ್ರಹಪಡಿಸಿದಾಗ ಇನ್ನೊಂದು ಗುಂಪು ಹೆಬ್ಬಾರ ಅವರು ಬಂದರೆ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂದು ವಾದಿಸಿದರು. ವಾದ -ಪ್ರತಿವಾದ ತಾರಕಕ್ಕೇರಿದಾಗ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಮತ್ತು ಶಾಸಕ ಭೀಮಣ್ಣ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ಶಾಸಕ ಹೆಬ್ಬಾರ ವಿರುದ್ಧ ಕಾಂಗ್ರೆಸ್ ಕಚೇರಿಯಲ್ಲಿ ಪೋಸ್ಟರ್: ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದ ಗೋಡೆಗಳ ಮೇಲೆ "ನಮ್ಮ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ " ಎಂಬ ಪೋಸ್ಟರ್ ಅಂಟಿಸುವ ಮೂಲಕ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಕಾಂಗ್ರೆಸ್ ನಾಯಕರ ಸಭೆಯ ಮುಂಚಿತವಾಗಿ ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿ, ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕಾಂಗ್ರೆಸ್‌ನಿಂದ ಮುಂಬೈ ಟೀಂ ಜತೆ ಬಿಜೆಪಿಗೆ ಹೋಗಿ ಸಚಿವರಾಗಿದ್ದ ಹೆಬ್ಬಾರ್ ಈಗ ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಕಾರಣ ಕಾಂಗ್ರೆಸ್‌ನ ಕೆಲವು ಸಚಿವರು, ಶಾಸಕರು ವಿರೋಧಿಸಿದ್ದರು. ಈಗ ಕಾರ್ಯಕರ್ತರಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ನಂತರ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾಡುವುದಾಗಿ ಹೆಬ್ಬಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.