ಸಾರಾಂಶ
ಭಾರತ ಕಮ್ಯುನಿಸ್ಟ್ ಪಕ್ಷದ ಹೂವಿನಹಡಗಲಿ ತಾಲೂಕು ಸಮ್ಮೇಳನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಶ್ರಮಿಕ ವರ್ಗವು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಉಸ್ತುವಾರಿ ಎಚ್.ಎಂ. ಸಂತೋಷ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ 4ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರಮಿಕ ವರ್ಗವು ಹಕ್ಕುಗಳಿಗಾಗಿ ಬೀದಿಗಳಿದು ಹೋರಾಟ ಮಾಡುತ್ತಾರೆ, ಆದರೆ ಬಂಡವಾಳಶಾಹಿ ಪರ ಸರ್ಕಾರ ನಮ್ಮ ಹಕ್ಕು ಕಸಿಯುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಶ್ರಮಿಕರ ಪರವಾಗಿ ಕೆಲಸ ಮಾಡುವಂತಹ ವ್ಯಕ್ತಿಗಳನ್ನು, ಗ್ರಾಮ ಮಟ್ಟದಿಂದ ಆಯ್ಕೆ ಮಾಡಲು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಆ ಮೂಲಕ ಬಂಡವಾಳ ಶಾಹಿ ಪರ ಸರ್ಕಾರಗಳಿಗೆ ಎಚ್ಚರಿಕೆ ನೀಡುವಂತಾಗಬೇಕಿದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇದಿನ್ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಹೊಸ ಉದ್ಯೋಗ ಸೃಷ್ಟಿಸದೇ, ಇವರು ಉದ್ಯೋಗ ಕಡಿತದಿಂದ ಯುವ ಜನರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ನಿತ್ಯ ಬೆಲೆ ಏರಿಕೆ, ಕೃಷಿ ವಿರೋಧಿ ನೀತಿಗಳಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕರ ಹೋರಾಟ ಗಟ್ಟಿಗೊಳಿಸಬೇಕಿದೆ. ದುಡಿಯುವ ವರ್ಗದ ಧ್ವನಿಯಾಗುವ ಆಶಯದೊಂದಿಗೆ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕೂಡ್ಲಿಗಿ ತಾಲೂಕಿನ ಸಿಪಿಐ ಕಾರ್ಯದರ್ಶಿ ವೀರಣ್ಣ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಜಪ ಮಾಡುತ್ತಾ ರಾಜ್ಯದ ಅಭಿವೃದ್ಧಿಯನ್ನು ಕಡೆಗಮಿಸಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಜನಹಿತ ಮರೆತು ಕುರ್ಚಿ ಕದನ ನಡೆಸುತ್ತಿವೆ. ಟಿಬಿ ಡ್ಯಾಂಗೆ ಗೇಟ್ ಅಳವಡಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಪ್ರತಿ ಮನೆಗೂ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಹಳ್ಳ ಹಿಡಿದಿದೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.ಸಿಪಿಐ ತಾಲೂಕು ಮಂಡಳಿ ಕಾರ್ಯದರ್ಶಿ ಸುರೇಶ ಹಲಗಿ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಬಿ.ಜಯಲಕ್ಷ್ಮಿ, ಬಿಸಿಯೂಟ ಫೆಡರೇಷನ್ ಅಧ್ಯಕ್ಷೆ ಎಚ್.ಅನಸೂಯಮ್ಮ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಪಿ.ಚಮನ್ ಸಾಬ್, ಗಂಗಾಧರ, ಪಿ.ಕವಿತಾ, ಡಿ.ಮುಕುಂದಗೌಡ, ಬಸವರಾಜ ಸಂಶಿ, ಎಚ್.ದಂಡೆಮ್ಮ ಉಪಸ್ಥಿತರಿದ್ದರು. ಇಪ್ಟಾ ಕಲಾವಿದ ಎ.ಡಿ. ದ್ವಾರಕೀಶ ಸಂಗಡಿಗರು ಕ್ರಾಂತಿಗೀತೆ ಹಾಡಿದರು.ಸತ್ಯ ಹೊರ ಹೊರ ತರಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸಂಕಷ್ಟದಲ್ಲಿರುವ ಕುಟುಂಬದ ಮಹಿಳೆಯರಿಗೆ ಸಾಲ ನೀಡಿ, ಶೋಷಣೆ ಮಾಡುತ್ತಿದ್ದಾರೆ ಎಂದು ಕೊಟ್ಟೂರಿನ ಸಿಪಿಐ ಕಾರ್ಯದರ್ಶಿ ಕೆ.ರೇಣುಕಮ್ಮ ಆರೋಪಿಸಿ, ಧರ್ಮಸ್ಥಳ ಭಾಗದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮಾರಣಹೋಮ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಹೊರ ಹೊರ ತರಬೇಕೆಂದು ಒತ್ತಾಯಿಸಿದರು.