ಸಾರಾಂಶ
ಚಳ್ಳಕೆರೆ ನಗರದ ಯಾದವರ ಹಾಸ್ಟೆಲ್ ಆವರಣದಲ್ಲಿ ತಾಲೂಕು ಗೊಲ್ಲ ನೌಕರರ ಸಂಘದಿಂದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಯಾದವ ನೌಕರರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದಲ್ಲಿ ಎಲ್ಲಾ ಸಮುದಾಯಗಳು ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಲು ಆರಂಭಿಸಿವೆ. ಕಳೆದ ನೂರಾರು ವರ್ಷಗಳಿಂದ ಮೂಡನಂಬಿಕೆ, ಮೌಢ್ಯ, ಸಂಪ್ರದಾಯಗಳನ್ನು ಅಳವಡಿಸಿಕೊಂಡ ಯಾದವ ಸಮುದಾಯವೂ ಬೇರೆ ಜಾತಿಗಳಂತೆ ಅಭಿವೃದ್ಧಿ ಹೊಂದಬೇಕಿದೆ. ವಿಶೇಷವಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ್ತ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಬೇಕಲ್ಲದೆ, ಅಭಿವೃದ್ಧಿಗೆ ಮಾರಕವಾದ ಗೊಡ್ಡು ಸಂಪ್ರದಾಯಗಳನ್ನು ತ್ಯಜಿಸಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಭಾನುವಾರ ನಗರದ ಯಾದವರ ಹಾಸ್ಟೆಲ್ ಆವರಣದಲ್ಲಿ ತಾಲೂಕು ಗೊಲ್ಲ ನೌಕರರ ಸಂಘ ಮತ್ತು ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತಿಯಾದ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಈ ಸಮುದಾಯದ ಎಲ್ಲಾ ಮುಖಂಡ ರೊಡನೆ ವಿಶ್ವಾಸದಿಂದ ಬೆರೆತಿದ್ದು ಅವರಲ್ಲೂ ಗೊಲ್ಲ ಸಮುದಾಯದ ಅಭಿವೃದ್ಧಿ ಹೊಂದಬೇಕೆಂಬ ಮಹದಾಸೆ ಇದೆ. ಯಾವುದೇ ಸಮುದಾಯ ಅಭಿವೃದ್ಧಿಯನ್ನು ದಾಖಲಿಸಬೇಕಾದರೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಈ ಸಮುದಾಯದ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನೀವೆಲ್ಲರೂ ಹೆಜ್ಜೆಹಾಕುತ್ತಿದ್ದೀರ, ಆದರೆ ಹಿಂದಿನ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಅಜಾಗಜಾಂತರ ವ್ಯತ್ಯಸವಿದೆ. ನೀವೆಲ್ಲರೂ ಇಂದಿನ ಸಂಪ್ರದಾಯಕ್ಕೆ ಹೊಂದಿಕೊಂಡು ಹೋಗಬೇಕು. ನಿಮ್ಮೆಲ್ಲರ ಅಭಿವೃದ್ಧಿ, ಕಲ್ಯಾಣ ನಿಮ್ಮ ಕೈಯಲ್ಲಿದೆ. ಈ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ತಾಲೂಕು ಗೊಲ್ಲ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಶ್ರೀಕಾಂತ್, ಪ್ರತಿ ವರ್ಷವೂ ನಾವು ನಮ್ಮ ಸಮುದಾಯದಲ್ಲಿ ಅತಿಹೆಚ್ಚು ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇವೆ. ಪ್ರತಿವರ್ಷವೂ ಉನ್ನತ ಶಿಕ್ಷಣದಿಂದ ಎಲ್ಲಾ ಹಂತದಲ್ಲೂ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಪರಿಪಾಠವನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಪ್ರತಿಭಾ ಪುರಸ್ಕಾರ ಆರಂಭವಾದ ಮೇಲೆ ವಿದ್ಯಾರ್ಥಿಗಳಲ್ಲೂ ಕ್ರಿಯಾಶೀಲತೆ ಹೆಚ್ಚಿದೆ. ಪ್ರತಿ ವರ್ಷವೂ ಹೆಚ್ಚಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ತಾಲೂಕು ಗೊಲ್ಲ ನೌಕರರ ಸಂಘವಲ್ಲದೆ, ಸಮುದಾಯದ ಇತರೆ ಸಂಘಗಳು ಸಹಕಾರ ನೀಡುತ್ತ ಬಂದಿವೆ ಎಂದರು.ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಟಿ.ರವಿಕುಮಾರ್ ಮಾತನಾಡಿ, ಸಮುದಾಯ ಇಂದು ಎಲ್ಲಾ ಹಂತದಲ್ಲೂ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ವಿಶೇಷವಾಗಿ ಚಳ್ಳಕೆರೆ ಕ್ಷೇತ್ರದಲ್ಲಿ ಈ ಸಮುದಾಯ ಉತ್ತಮ ಅಭಿವೃದ್ಧಿ ಸಾಧಿಸಲು ಶಾಸಕ ಟಿ.ರಘುಮೂರ್ತಿ ಕಾರಣಕರ್ತರು. ಕೋಟ್ಯಂತರ ರು. ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ನಮ್ಮ ಸಮುದಾಯವೂ ಸಹ ಅಭಿವೃದ್ಧಿ ಹೊಂದಲು ಶಾಸಕರ ಪರಿಶ್ರಮ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ, ಉಪಾಧ್ಯಕ್ಷೆ ಕವಿತಾ ವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಸುಮ ಭರಮಣ್ಣ, ಜೈತುಂಬಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಮಹಿಳಾ ಸಂಘದ ಕಾರ್ಯದರ್ಶಿ ಚಾರುಮತಿ, ಸಂಪತ್ ಕುಮಾರ್, ಗುರು ಪ್ರಸಾದ್, ರಾಜಣ್ಣ, ಕೆ.ಮಂಜಪ್ಪ, ಕಾರ್ಯಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಎಸ್.ನಾಗರಾಜ, ಗೊಲ್ಲ ನೌಕರರ ಸಂಘದ ಗೌರವಾಧ್ಯಕ್ಷ ಪ್ರೊ.ಮಂಜುನಾಥ, ಹುಲಿಕುಂಟೆ ವೈ.ಕಾಂತರಾಜ್, ಎಚ್.ಮಹಲಿಂಗಪ್ಪ, ಈರಗಟ್ಟಪ್ಪ, ವೃಷಬೇಂದ್ರಪ್ಪ, ಶಿವಣ್ಣ, ರಾಜಣ್ಣ, ತಿಪ್ಪೇಸ್ವಾಮಿ, ಮುರುಗೇಶಪ್ಪ, ಈರಣ್ಣ ಮುಂತಾದವರು ಇದ್ದರು.