ಸಾರಾಂಶ
ಪ್ರೋತ್ಸಾಹಧನ ವಿತರಣಾ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವಕನ್ನಡಪ್ರಭ ವಾರ್ತೆ ಹೊಸಪೇಟೆ
ಇಂದಿನ ಯುವಜನಾಂಗಕ್ಕೆ ಕನ್ನಡ ಭಾಷೆಯ ಅಂತಃಸತ್ವದ ಪರಿಚಯವಾಗಬೇಕು. ಸರ್ಕಾರ ಮತ್ತು ಸಮಾಜ ವರ್ತಮಾನದಲ್ಲಿ ಕನ್ನಡ ಭಾಷೆಯ ಸಮಸ್ಯೆ-ಸವಾಲುಗಳನ್ನು ಅರಿತುಕೊಂಡು ಕನ್ನಡವನ್ನು ಕಟ್ಟುವ ಕಾರ್ಯದಲ್ಲಿ ನಿರತವಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮೈಕೊ ಕನ್ನಡ ಬಳಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೋತ್ಸಾಹಧನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಕೊ ಕನ್ನಡ ಬಳಗ ಯಾವುದೇ ಸರ್ಕಾರದ ಅರ್ಥಿಕ ಸಹಾಯ ಇಲ್ಲದೇ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ. ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ನಿರತವಾಗಿದೆ. ಹೀಗೆ ಮೈಕೋ ಕನ್ನಡ ಬಳಗ ಸಂಸ್ಥೆಯು ಇನ್ನೂ ಹೆಚ್ಚಾಗಿ ಬೆಳೆಯಬೇಕು ಕನ್ನಡ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದರು.
ಮೈಕೋ ಕನ್ನಡ ಬಳಗದ ಅಧ್ಯಕ್ಷ ರಾಮತೀರ್ಥ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸಿ, ಕನ್ನಡಕ್ಕಾಗಿ ಇರುವ ಏಕೈಕ ವಿಶ್ವವಿದ್ಯಾಲಯ ಕನ್ನಡ ವಿಶ್ವವಿದ್ಯಾಲಯ ಆಗಿದೆ. ಈ ವಿಶ್ವವಿದ್ಯಾಲಯ ಉತ್ತಮವಾಗಿ ನಡೆದುಕೊಂಡು ಸಾಗುತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳು ಬೆಳೆದರೆ ಕನ್ನಡ ಬೆಳೆಯುತ್ತದೆ. ಈ ವಿಶ್ವವಿದ್ಯಾಲಯ ಬೆಳಯಬೇಕೆಂಬುದು ಮೈಕೊ ಕನ್ನಡ ಬಳಗದ ಆಶಯ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡ ಬೆಳೆಸಬೇಕಾದರೆ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.ಮೈಕೋ ಕನ್ನಡ ಬಳಗದ ಸಹ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ಸಾಹಿತಿ ಪ್ರೊ. ವೆಂಕಟಸುಬ್ಬಯ್ಯನವನರು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಿದ್ದ ದೇಣಿಗೆಯು ಇಂದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ವಿತರಣೆಯಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ಸಮಾರಂಭದಲ್ಲಿ 12 ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಈ ಸಂದರ್ಭ ಮೈಕೊ ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿ ಕೆ.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ. ಎಸ್.ವೈ ಸೋಮಶೇಖರ್ , ಅಧ್ಯಯನಂಗದ ನಿರ್ದೇಶಕ ಡಾ. ಅಮರೇಶ ಯತಗಲ್, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ, ಅಭಿವೃದ್ಧಿ ಅಧಯನ ವಿಭಾಗದ ಪ್ರೊ. ಜನಾರ್ದನ ಹಾಗೂ ಬೋಧಕೇತರ ಸಿಬ್ಬಂದಿ, ಮೈಕೋ ಕನ್ನಡ ಬಳಗದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.