ಯುವಜನಾಂಗ ಕೌಶಲ್ಯ ಪರಿಣಿತಿ ಸಾಧಿಸಲಿ: ಲಕ್ಷ್ಮಣ ಗುಂಥಾ

| Published : Sep 22 2025, 01:02 AM IST

ಯುವಜನಾಂಗ ಕೌಶಲ್ಯ ಪರಿಣಿತಿ ಸಾಧಿಸಲಿ: ಲಕ್ಷ್ಮಣ ಗುಂಥಾ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣುಮಕ್ಕಳಿಗೆ ಯಾವುದೇ ಅವಕಾಶ ಇಲ್ಲದಿದ್ದ ಸಂದರ್ಭದಲ್ಲಿಯೂ ತಮ್ಮ ಪರಾಕ್ರಮ ಹಾಗೂ ಉದಾತ್ತತೆಗಳ ಮೂಲಕ ಇತಿಹಾಸದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಅಂಥ ಮಹಿಳಾ ರಾಣಿಯರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಸ್ಪಷ್ಟ ಉನ್ನತ ಗುರಿಯನ್ನು ಹೊಂದಿ ಸಾಧನೆಯತ್ತ ಸಾಗಬೇಕು.

ಹಾವೇರಿ: ವಿಕಸಿತ ಭಾರತ ಅನೇಕ ವಿಷಯಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು, ಅದು ಅಭಿವೃದ್ದಿ ಹೊಂದಿದ ರಾಷ್ಟ್ರವೆನಿಸಿಕೊಳ್ಳಲು ಯುವಜನಾಂಗ ಕೌಶಲ್ಯ ಪರಿಣಿತಿ ಪಡೆಯುವುದರ ಜತೆಗೆ ನಿರಂತರ ಶ್ರಮವಹಿಸಬೇಕೆಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘ, ದೆಹಲಿ ಇದರ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಗುಂಥಾ ತಿಳಿಸಿದರು.ನಗರದ ಗುದ್ಲೆಪ್ಪ ಹಳ್ಳಿಕೇರಿ ಪಿಯು ಕಾಲೇಜಿನ ಇತಿಹಾಸ ವಿಭಾಗ ಹಾಗೂ ಪರಂಪರೆ ಕೂಟವು ಆಯೋಜಿಸಿದ್ದ ಮೂವರು ಮಹಾನ್ ಮಹಿಳಾ ಹೋರಾಟಗಾರರ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಳ್ಳಲು ಇತಿಹಾಸದಲ್ಲಿ ಆಗಿಹೋದ ಮಹನೀಯರ ಸಾಧನೆಗಳ ಕುರಿತು ತಿಳಿದುಕೊಳ್ಳುವಂತೆ ಸಲಹೆ ನೀಡಿದರು.ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಹೆಣ್ಣುಮಕ್ಕಳಿಗೆ ಯಾವುದೇ ಅವಕಾಶ ಇಲ್ಲದಿದ್ದ ಸಂದರ್ಭದಲ್ಲಿಯೂ ತಮ್ಮ ಪರಾಕ್ರಮ ಹಾಗೂ ಉದಾತ್ತತೆಗಳ ಮೂಲಕ ಇತಿಹಾಸದಲ್ಲಿ ಪ್ರಖ್ಯಾತಿ ಪಡೆದ ಮಹಿಳಾ ರಾಣಿಯರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಸ್ಪಷ್ಟ ಉನ್ನತ ಗುರಿಯನ್ನು ಹೊಂದಿ ಸಾಧನೆಯತ್ತ ಸಾಗಬೇಕು ಎಂದರು.ರಾಜ್ಯ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ವಿ. ಶೈಲಜಾ ಹಾಗೂ ಎಂ.ಆರ್.ಎಂ. ಕಾಲೇಜಿನ ಚೇರಮನ್ ಡಾ. ರಾಮಮೋಹನರಾವ್ ಮಾತನಾಡಿ, ಕಿತ್ತೂರಿನ ರಾಣಿ ಚನ್ನಮ್ಮ ಅದ್ವಿತೀಯಳಾಗಿದ್ದಾರೆ. ತತ್ವಜ್ಞಾನಿ ರಾಣಿ ಎಂದು ಪ್ರಸಿದ್ಧರಾದ ಮಾಳ್ವಾದ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಪ್ರತಿಪಾದಿಸಿದ ಮೌಲ್ಯಗಳು, ಜಾರಿಗೊಳಿಸಿದ ಸುಧಾರಣೆಗಳು, ನಿರ್ಮಿಸಿದ ಅನೇಕ ದೇವಾಲಯಗಳು, ಧರ್ಮಶಾಲೆಗಳು ಸಾಕ್ಷಿಯಾಗಿ ನಿಂತಿವೆ. ಕಾಶಿ ವಿಶ್ವನಾಥ ದೇವಾಲಯ ಹಾಗೂ ಗುಜರಾತ್‌ನ ಸೋಮನಾಥ ದೇವಾಲಯದ ನಾಶವಾದಾಗ ಅದನ್ನು ಮರುನಿರ್ಮಿಸಿದವರು ಅಹಲ್ಯಾಬಾಯಿ ಹೋಳ್ಕರ್, ಮತ್ತೊಬ್ಬ ರಾಣಿ ಉಳ್ಳಾಲದ ಅಬ್ಬಕ್ಕರಾಣಿ ಚೌಟ ಎಂದರು.ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಷ್ಠಿ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಇತಿಹಾಸ ಪ್ರಾಧ್ಯಾಪಕ ಡಾ. ಶಿವಯೋಗಿ ಕೋರಿಶೆಟ್ಟರ ಸ್ವಾಗತಿಸಿದರು. ಡಾ. ಶಿವಪೂಜಿ ಕೋಟಿ ಐಕ್ಯುಎಸಿ ಸಂಯೋಜಕಿ ರೂಪಾ ಕೋರೆ, ಪರಂಪರೆ ಕೂಟದ ಸಂಚಾಲಕ ಡಾ. ಶರಣಪ್ಪ ಜಗ್ಗಲ್, ಡಾ. ಮಹಾಂತೇಶ ಕುತನಿ, ಪ್ರೊ. ಕೃಷ್ಣಾ ಎಲ್.ಎಚ್., ಪ್ರೊ. ನಾಗರಾಜ ಮುಚ್ಚಟ್ಟಿ, ಚೇತನಾ ಪರಪ್ಪನವರ ಪಾಲ್ಗೊಂಡಿದ್ದರು.