ಹುಬ್ಬಳ್ಳಿ:

ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು ನಾವು ಬುದ್ಧಿಮಟ್ಟ ಹೆಚ್ಚಿಸಿಕೊಳ್ಳುವ ಜತೆಗೆ ಹೊಸತನಕ್ಕೆ ಒಗ್ಗಿಕೊಳ್ಳಬೇಕಿದೆ. ಯುವಜನತೆ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದೇ ಹೋದಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಡಾ. ಎ.ಎಸ್‌. ಕಿರಣ್‌ಕುಮಾರ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ವೇಮನ ವಿದ್ಯಾವರ್ಧಕ ಸಂಘದ ಫ್ಯೂಚರ್‌ ಪೋರ್ಜ್ ಎಂಜಿನಿಯರಿಂಗ್‌ ಕಾಲೇಜಿನ ಸಭಾ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳು ಬಹಳಷ್ಟು ವೇಗವಾಗಿ ಬೆಳೆಯುತ್ತಿವೆ. ಪ್ರತಿಯೊಬ್ಬರು ಅದಕ್ಕೆ ಪೂರಕವಾಗಿ ತಮ್ಮ ಕೌಶಲ ಬೆಳೆಸಿಕೊಳ್ಳಬೇಕಿದೆ. ಮನುಷ್ಯ ತನ್ನನ್ನು ತಾನು ಮೊದಲು ಅರ್ಥ ಮಾಡಿಕೊಂಡು ತನ್ನಲ್ಲಿರುವ ಸಾಮರ್ಥ್ಯ ಅರಿತುಕೊಳ್ಳಬೇಕು. ಆದರೆ, ಅದನ್ನು ಮಾಡದ ನಾವು ಒಂದು ರೀತಿಯ ರೋಬೋರ್ಟ್‌ನಂತೆ ಕೆಲಸ ಮಾಡುತ್ತಿದ್ದೇವೆ. ಇದರಿಂದಾಗಿ ನಮ್ಮತನ ಹಾಗೂ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದಲಾಗುತ್ತಿರುವ ಜಗತ್ತಿಗೆ ನಾವು ನಮ್ಮನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದು ಅತೀ ಅವಶ್ಯಕವಾಗಿದೆ. ಮಲ್ಟಿಪಲ್‌ ಟ್ಯಾಲೇಂಟ್‌ಗೆ ಇಂದು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದ್ದು, ಅದನ್ನು ಅರಿತುಕೊಂಡಲ್ಲಿ ಸಾಧನೆ ಮತ್ತಷ್ಟು ಸುಲಭವಾಗುತ್ತದೆ ಎಂದರು.

1947ರಿಂದ ಈ ವರೆಗೆ ಮಾಹಿತಿ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಯಾಗಿದೆ. ಇಸ್ರೋ ಸಂಸ್ಥೆಯೂ ರಾಕೆಟ್‌ ಲಾಂಚಿಂಗ್‌, ಚಂದ್ರಯಾನ, ಹವಾಮಾನ ವೈಪರಿತ್ಯ, ವಾತಾವರಣ ಹಾಗೂ ಪ್ರಸಕ್ತ ವಿದ್ಯಮಾನ ತಿಳಿಯವಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.ಎಂಜಿನೀಯರಿಂಗ್‌ ಕಾಲೇಜಿಗೆ ಚಾಲನೆ


ವಿದ್ಯಾನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್‌. ಪಾಟೀಲ ಕಾಲೇಜು ಆವರಣದಲ್ಲಿ ಪ್ರಸಕ್ತ ವರ್ಷದಿಂದ ಆರಂಭವಾಗುತ್ತಿರುವ ಫ್ಯೂಚರ್‌ ಪೋರ್ಜ್‌ ಎಂಜಿನಿಯರಿಂಗ್‌ ಅಕಾಡೆಮಿಯ ನೂತನ ಎಂಜಿನಿಯರಿಂಗ್‌ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಡಾ. ಎ.ಎಸ್‌. ಕಿರಣ್‌ಕುಮಾರ ಚಾಲನೆ ನೀಡಿದರು. ಈ ವೇಳೆ ಸಚಿವ ಎಚ್.ಕೆ. ಪಾಟೀಲ, ವೇಮನ ವಿದ್ಯಾವರ್ಧಕ ಸಂಘದ ಚೇರ್‌ಮನ್ ಡಿ.ಆರ್. ಪಾಟೀಲ, ಶಾಸಕ ಎನ್.ಎಚ್. ಕೋನರಡ್ಡಿ, ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಜಂಗಲ್, ಇಸ್ರೋ ನಿವೃತ್ತ ವಿಜ್ಞಾನಿ ಡಾ. ಆರ್.ವಿ. ನಾಡಗೌಡರ, ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಡಾ. ಎಸ್.ವಿ. ನಾಡಗೌಡರ ಇದ್ದರು.