ಸಾರಾಂಶ
ಹಾವೇರಿ: ಶ್ರೀ ಮಹರ್ಷಿ ವಾಲ್ಮೀಕಿ ಅವರು ಬರೆದ ರಾಮಾಯಣ ಎಲ್ಲರೂ ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಾವೇರಿ ಜಿಲ್ಲಾ, ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಪುಣ್ಯ-ಪುರಾಣ ಕಥೆಗಳನ್ನು ಅಧ್ಯಯನ ಮಾಡಬೇಕು. ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಎಲ್.ಜಿ.ಹಾವನೂರ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿ ನೀಡಿದ ಮೊದಲ ಧೀಮಂತ ನಾಯಕರಾಗಿದ್ದು, ಇದೇ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯ. ಇವರು ಸೌತ್‌ಆಫ್ರಿಕಾ ದೇಶದ ಸಂವಿಧಾನ ಬರೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಜಮೀನು ಹಾಗೂ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರದಲ್ಲಿ 5.45 ಕೋಟಿ ರು. ವೆಚ್ಚದಲ್ಲಿ ಭವ್ಯವಾದ ಶ್ರೀ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗಿದೆ. ಬರುವ ದಿನಗಳಲ್ಲಿ ವಿಜೃಂಭಣೆಯಿಂದ ಉದ್ಘಾಟನೆ ಮಾಡಲಾಗುವುದು ಎಂದರು.ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಅವರು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಶಿಷ್ಟ ವರ್ಗದ ಅಭ್ಯರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳನ್ನು ಪಾಸು ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಭಾರತದಲ್ಲಿ ಇರುವ ಮೌಲ್ಯಗಳು, ಸಂಸ್ಕೃತಿ, ಪರಂಪರೆ ಯಾವ ದೇಶಗಳಲ್ಲಿ ಇಲ್ಲ. ಹಾಗಾಗಿ ಬೇರೆ ಬೇರೆ ದೇಶಗಳು ನಮ್ಮ ದೇಶವನ್ನು ಕುತೂಹಲದಿಂದ ನೋಡುತ್ತವೆ. ಮಹಾಭಾರತ ಹಾಗೂ ರಾಮಾಯಣ ಮಹಾ ಕಾವ್ಯಗಳು ಎರಡು ಕಣ್ಣುಗಳು ಇದ್ದಂತೆ. ಶ್ರೀ ರಾಮನನ್ನು ಅವತಾರ ಪುರುಷ, ಮರ್ಯಾದಾ ಪುರುಷೋತ್ತಮ, ಆದರ್ಶಪುರುಷ, ಪಿತೃವಾಕ್ಯ ಪರಿಪಾಲಕ ಹೀಗೆ ಹಲವು ನಾಮಗಳಿಂದ ಕರೆಯುವ ವಿನೂತನ ವ್ಯಕ್ತಿತ್ವದ ಕುರಿತು ಶ್ರೀ ಮಹರ್ಷಿ ವಾಲ್ಮೀಕಿ ಅವರು ಬರೆದ ರಾಮಾಯಣದಲ್ಲಿ ಬಹಳ ವಿಶೇಷವಾಗಿ ವರ್ಣಿಸಿದ್ದು, ಎಲ್ಲ ವ್ಯಕ್ತಿಗಳು ಕಲಿಯುವ ಮೌಲ್ಯಗಳಿವೆ ಎಂದರು.ಪತ್ರಕರ್ತ ಮಾಲತೇಶ ಅಂಗೂರ ಉಪನ್ಯಾಸ ನೀಡಿ, ಸಾವಿರಾರು ವರ್ಷಗಳ ಹಿಂದೆ ರಚಿಸಲಾದ ರಾಮಾಯಣ ಮಹಾಕಾವ್ಯ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇದು ಹರಿಯುವ ನೀರು ಇದ್ದಂತೆ, ಶ್ರೀ ಮಹರ್ಷಿ ವಾಲ್ಮೀಕಿ ಅವರ ರಚಿಸಿದ ರಾಮಾಯಣದಲ್ಲಿ ಮೌಲ್ಯಗಳಿವೆ. ಪ್ರತಿಯೊಂದು ಸನ್ನಿವೇಶಗಳು ಒಂದೊಂದು ಅನುಭವ ನೀಡುತ್ತವೆ ಎಂದರು. ಇದೇ ಸಂದರ್ಭದಲ್ಲಿ 2020ನೇ ಸಾಲಿನ ಪರಿಸರ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಮಾಲತೇಶ ಅಂಗೂರ, ಕಳೆದ ಸಾಲಿನ ಎಸ್ಸಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧಾ ವಂಟಗೋಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೆಗಣ್ಣಿ, ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ಬಸವರಾಜ ಹಾದಿಮನಿ, ಅಶೋಕ ಹರಣಗಿರಿ, ಶೇಖರ ಕಳ್ಳಿಮನಿ, ಮಲ್ಲಿಕಾರ್ಜುನ ಉದಗಟ್ಟಿ, ನಾಗರಾಜ ಬಡಮ್ಮನವರ, ಭೀಮಣ್ಣ ಯಲ್ಲಾಪುರ, ರಾಘವೇಂದ್ರ ಬಾಸೂರ ಇತರರು ಇದ್ದರು. ಪ್ರಭಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಶಾಂತ ವರಗಪ್ಪನವರ ಸ್ವಾಗತಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ನಗರದ ಮುರುಘರಾಜೇಂದ್ರಮಠದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಕೆ: ಎಲ್.ಜಿ.ಹಾವನೂರ ಸ್ಮಾರಕ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಐದು ಎಕೆರೆ ಜಮೀನು ನೀಡುವಂತೆ, ಕೇಂದ್ರ ಬಸ್ ನಿಲ್ದಾಣಕ್ಕೆ ಅಥವಾ ನೂತನ ಕಾನೂನು ಕಾಲೇಜಿಗೆ ಎಲ್.ಜಿ.ಹಾವನೂರ ಹೆಸರು ಇಡಲು ಹಾಗೂ ನಗರದಲ್ಲಿ ನಿರ್ಮಾಣ ಮಾಡಲಾದ ಶ್ರೀ ಮಹರ್ಷಿ ವಾಲ್ಮೀಕಿ ಭವನಕ್ಕೆ ಹೋಗುವ ರಸ್ತೆ ಎರಡು ಬದಿಗಳಲ್ಲಿ ಗಿಟಗಂಟಿ ಸ್ವಚ್ಛ ಮಾಡುವಂತೆ ಹಾಗೂ ಎಸ್.ಟಿ. ಸಮುದಾಯದೊಂದಿಗೆ ಅನ್ಯ ಜಾತಿ ಅವರನ್ನು ಸೇರ್ಪಡೆ ಮಾಡುವುದಾದರೆ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಪರಿಶಿಷ್ಟ ವರ್ಗಕ್ಕೆ ಇರುವ ಶೇ.7ರಷ್ಟು ಮೀಸಲಾತಿಯಲ್ಲಿ ಅವರನ್ನು ಸೇರಿಸದಂತೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಮನವಿ ಸಲ್ಲಿಸಿದರು.