ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಲಿ

| Published : Jul 04 2025, 11:51 PM IST

ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಲಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ಗದಗ: ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ನಗರದ ಶ್ರೀ ಜ. ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ಫ.ಗು. ಹಳಕಟ್ಟಿ ಅವರ ವಚನ ಸಾಹಿತ್ಯದ ಮೇಲಿನ ಕಾಳಜಿಯಿಂದ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿದರು. ವಚನ ಸಾಹಿತ್ಯ ಶಾಶ್ವತವಾಗಿ ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜ. ತೋಂಟದಾರ್ಯ ಸಂಸ್ಥಾನ ಮಠದ ಜ. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ. ಫ.ಗು. ಹಳಕಟ್ಟಿ ಅವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯ ಪ್ರಕಟಿಸುವುದು ಸುಲಭ ಕಾರ್ಯವಾಗಿರಲಿಲ್ಲ. ಅಡೆತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿದರು. ಅವರ ಇಚ್ಛಾಶಕ್ತಿ ಎಂತಹುದು ಎಂದು ಇದರಿಂದ ತಿಳಿಯುತ್ತದೆ ಎಂದರು.

ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಪುರ ಮಾತನಾಡಿ, ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಲೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾರಂಭಿಸಿದರು. 1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಮಾಡಿದ್ದರು. ಸರ್ಕಾರ, ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಇತಿಹಾಸ ನೆನಪಿಡುವಂಥದ್ದಾಗಿದೆ ಎಂದರು.

ಮೂಲಗ್ರಂಥ, ಟೀಕಾಗ್ರಂಥ, ಸ್ವತಂತ್ರ ಗ್ರಂಥ, ಪಠ್ಯ ಪುಸ್ತಕ, ಗದ್ಯಗ್ರಂಥ, ಐತಿಹಾಸಿಕ ಗ್ರಂಥ, ಧಾರ್ಮಿಕ ಪುರುಷರ ಚರಿತ್ರೆ ಸೇರಿದಂತೆ 165 ಗ್ರಂಥಗಳ ಪ್ರಕಟಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾ ಬಬರ್ಜಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಸ್ವಾಗತಿಸಿದರು. ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತ ಪಡಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.