ಯುವಜನರು ಬದುಕಿನ ಶೈಲಿ ಆಹಾರ ಪದ್ಧತಿ ಬದಲಿಸಲಿ

| Published : Mar 22 2024, 01:05 AM IST

ಸಾರಾಂಶ

ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಯುವಜನರಲ್ಲಿ ರಕ್ತಹೀನತೆ ಹೆಚ್ಚುತ್ತಿದೆ.

ಹಗರಿಬೊಮ್ಮನಹಳ್ಳಿ: ಹದಿಹರೆಯದವರಲ್ಲಿ ರಕ್ತದ ಕೊರತೆಯಿಂದಾಗಿ ಜೀವನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದೆ. ಯುವಕರು ಉತ್ಸಾಹಹೀನರಾಗುತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಂ.ಶಿವರಾಜ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬಾಚಿಗೊಂಡಹಳ್ಳಿಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಯುವಜನರಲ್ಲಿ ರಕ್ತಹೀನತೆ ಹೆಚ್ಚುತ್ತಿದೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳ ರಕ್ತ ತಪಾಸಣೆ ನಡೆಸಿದ ವೇಳೆ ಶೇ.೧೬ರಷ್ಟು ಯುವಜನರಲ್ಲಿ ರಕ್ತಹೀನತೆ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವಜನರ ಬದುಕಿನ ಶೈಲಿ ಮತ್ತು ಆಹಾರ ಪದ್ಧತಿ ಆರೋಗ್ಯಕರವಾಗಬೇಕಿದೆ. ತಾಲೂಕಿನಲ್ಲಿ ಒಟ್ಟು ೫೫ ಸಮಿತಿ ರಚಿಸಿ ಆರೋಗ್ಯವರ್ಧನೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯು.ಯಮುನಾ ಮಾತನಾಡಿ, ತಾಲೂಕಿನ ೫೫ ಸಮಿತಿಗಳಲ್ಲಿ ತಾಯಿ ಕಾರ್ಡ್, ಮಕ್ಕಳ ಆರೈಕೆ, ಲಸಿಕೆ ಮತ್ತು ಪೌಷ್ಟಿಕಾಂಶ ಮತ್ತು ವಿವಿಧ ಯೋಜನೆಗಳ ಸೌಲಭ್ಯ ಕುರಿತಂತೆ ಚರ್ಚಿಸಿ, ಪರಸ್ಪರ ಮಾಹಿತಿ ವಿನಿಮಯ ಮಾಡಲಾಗುತ್ತದೆ. ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆರೋಗ್ಯ ಇಲಾಖೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಣಾಮ ತಾಯಿ ಮತ್ತು ಮಗುವಿನ ಮರಣದ ಸಂಖ್ಯೆ ತಗ್ಗಿದೆ ಎಂದು ತಿಳಿಸಿದರು.ಪಿಎಚ್‌ಸಿಒ ಶೈಲಜಾ, ಸ್ವಸಹಾಯ ಸಂಘದ ಎಂ.ಗೀತಾ, ಮುಖಂಡರಾದ ಪಿ.ನಟರಾಜ, ಪ್ರಕಾಶ್, ಸ್ವಸಹಾಯಕ ಸಂಘದ ಸದಸ್ಯರಾದ ನಂದಿನಿ. ಯಶೋಧಾ, ಚೈತ್ರಾ, ಸುಧಾ, ಮಂಜುಳಾ ನೀಲಮ್ಮ, ಬುಡ್ಡಿಮ, ಅಂಗನವಾಡಿ ಕಾರ್ಯಕರ್ತರಾದ ಕೊಟ್ರಮ್ಮ, ಶಿಲ್ಪಾ, ಮಂಗಳಗೌರಿ ಇತರರಿದ್ದರು.