ಸಾರಾಂಶ
ಹೊನ್ನಾಳಿ: ಈ ಹಿಂದೆ ಯುವಕರು ಗರಡಿ ಮನೆಗಳಲ್ಲಿ ಕುಸ್ತಿ ತಾಲೀಮು ಮಾಡುತ್ತಿದ್ದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ, ಆಧುನಿಕತೆಯ ಇಂದಿನ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯ ಕಲೆಗಳಲ್ಲಿ ಒಂದಾದ ಕುಸ್ತಿ ಆಡುವುದಕ್ಕೆ ನಿರಾಸಕ್ತಿ ವಿಷಾದನೀಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸಂಜೆ ದುರ್ಗಾಬಿಕಾ ಹಾಗೂ ಮರಿಯಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಆಂಜನೇಯ ಟ್ರಸ್ಟ್ ಕಮಿಟಿ ವತಿಯಿಂದ ನಡೆದ ಕೊನೆ ದಿನದ ಬಯಲು ಖಾಟಾ ಜಂಗೀ ಕುಸ್ತಿಯಲ್ಲಿ ಸಾಧನೆ ಮೆರೆದ ಮಹಿಳಾ ಕುಸ್ತಿಪಟುಗಳಿಗೆ ಬೆಳ್ಳಿಗದೆ ವಿತರಿಸಿ ಅವರು ಮಾತನಾಡಿದರು. ಕುಸ್ತಿ ಕೇವಲ ಕ್ರೀಡೆಯಲ್ಲ, ಅದು ಜಾನಪದ ಸಂಸ್ಕೃತಿಯ ಕಲಾ ಪ್ರತೀಕ. ಕುಸ್ತಿಯಲ್ಲಿ ಗೆಲ್ಲಲ್ಲು ದೈಹಿಕ ಶಕ್ತಿಯೊಂದಿಗೆ ಮಾನಸಿಕ ಯುಕ್ತಿಯೂ ಬಹುಮುಖ್ಯ. ಆದ್ದರಿಂದ ಯುವ ಸಮುದಾಯ ಮೊಬೈಲ್ ಗೀಳು ಬಿಟ್ಟು, ಜಾನಪದ ಕ್ರೀಡೆಗಳಲ್ಲಿ ಸಾಧನೆಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಕರು ಕೇವಲ ಓದಿನಲ್ಲಿ ಮಾತ್ರ ನಿರತರಾಗಿ ಇತರ ಚಟುವಟಿಕೆಗಳಿಂದ ದೂರು ಸರಿಯುತ್ತಿರುವುದರಿಂದ ಇಂದು ಯುವಕರು ಎಲ್ಲ ರಂಗದಲ್ಲಿ ಅನಾಸಕ್ತಿ ಹೊಂದುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರಿಗೇ ಅಪಾಯ ಎಂಬುದನ್ನು ಯಾರು ಮರೆಯಬಾರದು. ಜಾನಪದ ಕ್ರೀಡೆಗಳು ಆರೋಗ್ಯ ಸದೃಢಗೊಳಿಸುವ ಜೊತೆಗೆ ಏಕಾಗ್ರತೆ ಕಲಿಸುತ್ತದೆ ಎಂದರು.
ಪುರಸಭೆ ಸದಸ್ಯ ಧರ್ಮಪ್ಪ ಮಾತನಾಡಿ, ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಧಾರವಾಡ, ದಾವಣಗೆರೆ, ಶಿವಮೊಗ್ಗ, ತುಮ್ಮಿನಕಟ್ಟೆ ಸೇರಿದಂತೆ ವಿವಿಧ ಹೊರ ರಾಜ್ಯ ಹಗೂ ಜಿಲ್ಲೆಗಳಿಂದ ಕುಸ್ತಿಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.ಚಪ್ಪಾಳೆ ತಟ್ಟಿ ಪ್ರೋತ್ಸಾಹ:
ಶಿಕಾರಿಪುರದ ಸೃಷ್ಟಿ ಹಾಗೂ ಶಿವಮೊಗ್ಗದ ಜಲಜಾಕ್ಷಿ ಇವರಿಬ್ಬರ ಆಕರ್ಷಕ ಕುಸ್ತಿಯ ಪ್ರದರ್ಶನ ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿತ್ತು. ಮಹಿಳಾ ಕುಸ್ತಿಯಲ್ಲಿ ಶಿವಮೊಗ್ಗದ ಜಲಜಾಕ್ಷಿ ಪ್ರಥಮ ಸ್ಥಾನ ಗೆದ್ದು ಬೀಗಿದರು, ಶಿಕಾರಿಪುರದ ಸೃಷ್ಟಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.ಗೆದ್ದ ಪ್ರಮುಖರು:
ಕೊಲ್ಲಾಪುರದ ಉಮೇಶ್ ಜಾಧವ್ ಬೆಳ್ಳಿಗದೆ ಹಾಗೂ ₹25 ಸಾವಿರ ನಗದು ಪಡೆದರೆ, ರೋಶನ್ ಗವಾಸ್ಪುರ ₹25 ಸಾವಿರ ನಗದು ಬಹುಮಾನ ಪಡೆದರು. ಉಳಿದ ಕುಸ್ತಿಪಟುಗಳಿಗೆ ವಿವಿಧ ಮೊತ್ತದ ನಗದು ಬಹುಮಾನ ವಿತರಿಸಲಾಯಿತು.ಆಂಜನೇಯ ಟ್ರಸ್ಟ್ ಕಮಿಟಿ ಅಧ್ಯಕ್ಷ ನರಸಿಂಹಪ್ಪ, ಯಜಮಾನ್ ರಾಜಪ್ಪ, ಎಚ್.ಬಿ.ಚಿನ್ನಪ್ಪ, ಮಹೇಶಣ್ಣ, ಶಾಂತ, ರೇವಣಸಿದ್ದಪ್ಪ, ವಿಜಿ ಗೌಡ, ಬೂದಿ ರವಿ, ಎಂ.ಆರ್. ಮಹೇಶ್, ರಘುಸ್ವಾಮಿ, ಜಗ್ಗುಸ್ವಾಮಿ, ಕುಮಾರ ಸಾಂಗ್ಲಿ, ಯೋಗಿಶ್, ಮಂಜು ಕರವೇ, ಕತ್ತಿಗೆ ನಾಗರಾಜ ಹಾಗೂ ತೀರ್ಪುಗಾರರಾದ ಪೈಲ್ವಾನ್ ರಂಗಪ್ಪ, ಪೈಲ್ವಾನ್ ವಾಜಿದ್, ಪೈಲ್ವಾನ್ ಸಣ್ಣಸಿದ್ದಪ್ಪ, ಕರಿಸಿದ್ದಪ್ಪ, ಮಂಜು, ಮುನ್ನ ಹಾಗೂ ಇತರರು ಇದ್ದರು.