ಸಮಾಜವನ್ನು ಮುನ್ನೆಡೆಸುವ ಮಹತ್ತರವಾದ ಜವಾಬ್ದಾರಿಯು ಯುವ ಸಮುದಾಯದ ಮೇಲಿದೆ.

ಸಾಂಬ್ರಾಣಿ ಗ್ರಾಮದಲ್ಲಿ ಸಮಾಜ ಕಾರ್ಯ ಬುಡಕಟ್ಟು ಶಿಬಿರಕನ್ನಡಪ್ರಭ ವಾರ್ತೆ ಹಳಿಯಾಳ

ಸಮಾಜವನ್ನು ಮುನ್ನೆಡೆಸುವ ಮಹತ್ತರವಾದ ಜವಾಬ್ದಾರಿಯು ಯುವ ಸಮುದಾಯದ ಮೇಲಿದೆ. ಈ ಜವಾಬ್ದಾರಿ ವಹಿಸಲು ಯುವ ಸಮುದಾಯದವು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಸಜ್ಜಾಗಬೇಕು ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್ ಹೇಳಿದರು.

ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದವರು ಆಯೋಜಿಸಿದ 2025-26ನೇ ಸಾಲಿನ ಸಮಾಜಕಾರ್ಯ ಬುಡಕಟ್ಟು ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.

ದೇಶವನ್ನು ಮುನ್ನೆಡೆಸುವ ಜವಾಬ್ದಾರಿಯು ಗಂಭೀರವಾಗಿರುವುದರಿಂದ ಯುವಸಮುದಾಯವು ಔದ್ಯೋಗಿಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಭವ್ಯ ಸಮಾಜ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಅಶೋಕ ಡಿಸೋಜ ಮಾತನಾಡಿ, ಯುವಜನಾಂಗದ ಮೇಲೆ ದೇಶ ಹಾಗೂ ಸಮಾಜವು ಬಾರಿ ನಿರೀಕ್ಷೆಯನ್ನು ಹೊಂದಿದೆ. ಅದಕ್ಕಾಗಿ ಯುವಸಮುದಾಯವು ಮಾನವೀಯ ಮತ್ತು ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಸಮುದಾಯದ ಏಳಿಗೆಗಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಾಜಕಾರ್ಯ ಬುಡಕಟ್ಟು ಶಿಬಿರದ ಸಂಯೋಜಕರಾದ ಡಾ. ದೇವತಾ ಡಿ. ಗಸ್ತೆ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದಲ್ಲಿ ಕೈಗೊಳ್ಳುವಂತಹ ಪ್ರತಿಯೊಂದು ಕಾರ್ಯಕ್ರಮಗಳು ಯೋಜನೆಗಳು ಭಿನ್ನವಾಗಿರುತ್ತವೆ. ಶಿಬಿರದಲ್ಲಿ ಕೈಗೊಳ್ಳುವ ಬಹುಪಯುಕ್ತವಾದ ಚಟುವಟಿಕೆಗಳ ಸದುಪಯೋಗವನ್ನು ಬುಡಕಟ್ಟು ಸಮುದಾಯದವರು ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಿರಣಕುಮಾರ, ಸಿಬ್ಬಂದಿ ಕೌಶಿಕ್, ಬೈರಪ್ಪ ಹಾಲಪ್ಪಗೋಳ, ರೋಹಿತ್ ಪಾಟೀಲ ಹಾಗೂ ಇತರರು ಇದ್ದರು. ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶ್ರೀಕಾಂತ ನರ್ಚಕ್ಕನವರ ಹಾಗೂ ಪೂಜಾ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.