ಸಾರಾಂಶ
- ಯುವ ಸಪ್ತಾಹ ಉದ್ಘಾಟಿಸಿದ ಖ್ಯಾತ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ
ಕನ್ನಡಪ್ರಭ ವಾರ್ತೆ ಧಾರವಾಡಯುವ ಜನರು ಭಾರತೀಯತೆಯನ್ನು ಮುಂದಿಟ್ಟುಕೊಂಡು ವಿಜ್ಞಾನ ತಂತ್ರಜ್ಞಾನದ ಮೂಲಕ ಜಗತ್ತಿಗೆ ಕೊಡುಗೆ ನೀಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ 129ನೇ ಜಯಂತ್ಯುತ್ಸವ, ಯುವ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.ಹುಬ್ಬಳ್ಳಿಯಲ್ಲಿ ಸದ್ಗುರು ಶ್ರೀ ಸಿದ್ದಾರೂಢರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದ ಸ್ವಾಮಿ ವಿವೇಕಾನಂದರು, ಸರ್ವರಲ್ಲಿ ಒಂದೇ ಭಾವನೆ ಸರ್ವರಲ್ಲಿ ಶಿವನ ಸ್ವರೂಪ ಕಂಡವರಾಗಿದ್ದರು. ಅತೀಂದ್ರಿಯ ಧ್ಯಾನ ಮತ್ತು ಯೋಗದಿಂದ ಪ್ರತಿಯೊಬ್ಬರು ಚೈತನ್ಯಶೀಲರಾಗಿರಲು ಸಾಧ್ಯವಿದೆ ಎಂದರು.
‘ಮೇಕ್ ಇನ್ ಇಂಡಿಯಾ’ ವಿಚಾರ ಸ್ವಾಮಿ ವಿವೇಕಾನಂದರ ವಿಚಾರಧಾರೆಯಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ, ವಿಜ್ಞಾನದ ಜೊತೆಗೆ ತತ್ವಜ್ಞಾನ ಕೂಡ ಅಗತ್ಯವಾಗಿದೆ. ದೇಶ ವಿದೇಶಗಳಲ್ಲಿ ವಿಚಾರಧಾರೆಗಳ ಐದು ನೂರಕ್ಕೂ ಹೆಚ್ಚು ರಾಮಕೃಷ್ಣ ಪರಮಹಂಸರ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ, ಪ್ರೊ. ಕೆ.ಬಿ. ಗುಡಿಸಿ, ವ್ಯಕ್ತಿತ್ವ ವಿಕಸನ ಮೂಲಕ ಸಮಾಜದ ವಿಕಸನ, ರಾಷ್ಟ್ರದ ವಿಕಸನ, ವಿಶ್ವ ವಿಕಸನ ಮಾಡುವುದು ಸ್ವಾಮಿ ವಿವೇಕಾನಂದರ ತತ್ವವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯಲಕ್ಷ್ಮೀ ನಾಂದೆಡ (ಪ್ರಥಮ), ಶ್ರೇಯಾಶಾಮ್ ನಜಾರೆ (ದ್ವಿತೀಯ), ಆಸ್ಮಾ ನಾಯಕ (ತೃತೀಯ) ಬಹುಮಾನ ಪಡೆದರು.ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಹಣಕಾಸು ಅಧಿಕಾರಿ, ಪ್ರೊ. ಸಿ. ಕೃಷ್ಣಮೂರ್ತಿ, ಎನ್.ಎಸ್.ಎಸ್. ಸಂಯೋಜಕ ಡಾ. ಎಂ.ಬಿ. ದಳಪತಿ, ಪ್ರೊ. ಬಿ.ಎಚ್. ನಾಗೂರ ಪರಿಚಯಿಸಿದರು. ಡಾ. ನಿಂಗಪ್ಪ ಮುದೇನೂರ ನಿರೂಪಿಸಿದರು.