ಪ್ರಜಾಪ್ರಭುತ್ವದಲ್ಲಿ ನಮ್ಮ ದೇಶ ದೊಡ್ಡದು. ಅಲ್ಲದೆ ಜನಸಂಖ್ಯೆಯಲ್ಲಿಯೂ ನಾವು ಮೊದಲ ಸ್ಥಾನದಲ್ಲಿದ್ದೇವೆ. ವಿದ್ಯಾರ್ಥಿಗಳು ಮೌಲ್ಯವನ್ನು ರೂಢಿಸಿಕೊಳ್ಳಿ.

ಹೊನ್ನಾವರ: ಯುವಜನತೆಯ ಪಾಲ್ಗೊಳ್ಳುವಿಕೆಯಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ವಿದ್ಯಾರ್ಥಿಗಳು ರಾಜಕೀಯ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಎಂಪಿಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ. ಭಟ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಂಪಿಇ ಸೊಸೈಟಿಯ ಎಸ್ಡಿಎಂ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಎಂಪಿಇ ಸೊಸೈಟಿಯ ಎಸ್ಡಿಎಂ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಯುವ ಸಂಸತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ನಮ್ಮ ದೇಶ ದೊಡ್ಡದು. ಅಲ್ಲದೆ ಜನಸಂಖ್ಯೆಯಲ್ಲಿಯೂ ನಾವು ಮೊದಲ ಸ್ಥಾನದಲ್ಲಿದ್ದೇವೆ. ವಿದ್ಯಾರ್ಥಿಗಳು ಮೌಲ್ಯವನ್ನು ರೂಢಿಸಿಕೊಳ್ಳಿ. ವಿದೇಶಿಗರು ಸಹ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಗಳುತ್ತಾರೆ. ಜನಪ್ರತಿನಿಧಿಗಳ ಆಯ್ಕೆ ಪ್ರಾಮಾಣಿಕವಾಗಿರಬೇಕು. ಉತ್ತಮ ರಾಜಕಾರಣವನ್ನು ಮಾಡಬೇಕು ಎಂದರು.ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿದ ತಾಲೂಕು ದಂಡಾಧಿಕಾರಿ ಪ್ರವೀಣ್ ಕರಾಂಡೆ ಮಾತನಾಡಿ, ವಿದ್ಯಾರ್ಥಿಗಳು ಸಂಸತ್ತಿನ ಬಗ್ಗೆ ತಿಳಿದಿರಬೇಕು. ಪ್ರಜೆಗಳೇ ಪ್ರಭುಗಳು ಎಂಬ ಅರಿವನ್ನು ಹೊಂದಿದರ ಜತೆಗೆ ನಮ್ಮ ಸುತ್ತಲಿನವರಿಗೂ ಯುವ ಜನತೆ ಇದರ ಬಗ್ಗೆ ತಿಳಿಸಬೇಕು. ವಿಧಾನಸಭೆ, ಲೋಕಸಭೆಯ ಸೆಷನ್‌ಗಳ ಬಗ್ಗೆ ತಿಳಿದಿರಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಗ್ರೇಡ್ 1 ಸಹಾಯಕ ನಿರ್ದೇಶಕ ಜಿ. ಸತೀಶ ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವ, ಭಾಗವಹಿಸುವಿಕೆ, ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುವುದನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಮುಖ್ಯ ಎಂದರು.ಎಸ್ಡಿಎಂ ಪಪೂ ಕಾಲೇಜಿನ ಪ್ರಾಚಾರ್ಯ ಡಾ. ರಾಜು ಮಾಳಗಿಮನಿ ಮತ್ತು ನಿವೃತ್ತ ಪ್ರಾಧ್ಯಾಪಕ ಜಿ.ಪಿ. ಪಾಠಣಕರ್ ಮಾತನಾಡಿದರು. ತಾಲೂಕು ಶಿಕ್ಷಣಾಧಿಕಾರಿ ಬಿ.ಎಸ್. ಭಜಂತ್ರಿ, ಸರ್ಕಾರಿ ಮೋಹನ ಶೆಟ್ಟಿ ಪಪೂ ಕಾಲೇಜಿನ ಪ್ರಾಚಾರ್ಯ ರವಿ ಗೌಡ, ಕರವೇ ತಾಲೂಕಾಧ್ಯಕ್ಷ ಮಂಜುನಾಥ್ ಗೌಡ ಉಪಸ್ಥಿತರಿದ್ದರು. ನಂತರ ತಾಲೂಕಿನ ವಿವಿಧ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಯುವ ಸಂಸತ್ತು ಕಾರ್ಯಕ್ರಮವನ್ನು ನಡೆಸಿದರು. ತಾಲೂಕು ಯುವಜನ ಮತ್ತು ಕ್ರೀಡಾಧಿಕಾರಿ ಸುದೀಶ್ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.