ಯುವ ಜನತೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಲಿ-ಪ್ರಕಾಶಗೌಡ

| Published : Jan 17 2024, 01:45 AM IST

ಯುವ ಜನತೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಲಿ-ಪ್ರಕಾಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಯುವಕ, ಯುವತಿಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬೇಕಾದರೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ಅಂತೂರ-ಬೆಂತೂರ ಗ್ರಾಪಂ ಅಧ್ಯಕ್ಷ ಪ್ರಕಾಶಗೌಡ ಎಚ್. ಪಾಟೀಲ ಹೇಳಿದರು.

ಗದಗ: ಪ್ರಸ್ತುತ ದಿನಗಳಲ್ಲಿ ಯುವಕ, ಯುವತಿಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬೇಕಾದರೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ಅಂತೂರ-ಬೆಂತೂರ ಗ್ರಾಪಂ ಅಧ್ಯಕ್ಷ ಪ್ರಕಾಶಗೌಡ ಎಚ್. ಪಾಟೀಲ ಹೇಳಿದರು.

ತಾಲೂಕಿನ ಅಂತೂರ ಬೆಂತೂರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-50ರ ಅಂಗವಾಗಿ ನಡೆದ ಯುವಸೌರಭ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಪೀಳಿಗೆ ಗುಣಾತ್ಮಕ ಶಿಕ್ಷಣ ಪಡೆಯುವ ಜತೆಗೆ, ಸಾಂಸ್ಕೃತಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೊಬೈಲ್‌, ಟಿವಿ ನೋಡುತ್ತ ಸಮಯ ವ್ಯರ್ಥಗೊಳಿಸದೆ, ಸೃಜನಶೀಲತೆ ಬೆಳೆಸಿಕೊಳ್ಳಬೇಕು. ನಮ್ಮ ನೆಲದ ಪ್ರತಿಭೆಗಳನ್ನು ಬೆಳಕಿಗೆ ತರಲು ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿದೆ. ಮುಂದೆ ದೊಡ್ಡ ವೇದಿಕೆಗಳಲ್ಲಿ ನೀವೆಲ್ಲರೂ ಮಿಂಚಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶಸ್ವಾಮಿ ಬಿ. ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ. ಆ ಕಲೆಯನ್ನು ಹೊರಹಾಕಲು ಒಂದು ಸೂಕ್ತವಾದ ವೇದಿಕೆ ಹಂಬಲಿಸುತ್ತಾ ಇರುತ್ತದೆ. ಅಂತಹ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಯುವ ಸೌರಭ. ಸಿಕ್ಕ ಅವಕಾಶವನ್ನು ವೇದಿಕೆಯಲ್ಲಿ ಬಳಸಿಕೊಂಡು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಜತೆಗೆ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸುವ ಕೆಲಸ ಯುವ ಸಮುದಾಯ ಮಾಡಬೇಕು ಎಂದರು.ಗ್ರಾಪಂ ಉಪಾಧ್ಯಕ್ಷೆ ಪಾರವ್ವ ಈಶ್ವರಪ್ಪ ಯಡಿಕುಂಟಿ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎ. ಮಣಕವಾಡ ಹಾಗೂ ಗ್ರಾಪಂ ಸರ್ವ ಸದಸ್ಯರು ಇದ್ದರು. ಗದಗ ಜಿಲ್ಲೆಯ ಅನೇಕ ಯುವ ಕಲಾವಿದರಿಂದ ಡೊಳ್ಳು ಕುಣಿತ, ಸಮೂಹ ನೃತ್ಯ, ನಾಟಕ, ಜನಪದ ನೃತ್ಯ, ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.