ಸಾರಾಂಶ
ಹಳ್ಳಿಗಳಲ್ಲಿ ರೈತ ಬೆಳೆ ಬೆಳೆದು ಪೂಜಿಸುವ ಮೂಲಕ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸುತ್ತಿದ್ದೇವೆ. ಇದನ್ನು ಯುವ ಪೀಳಿಗೆಯು ಮುಂದುವರಿಸಬೇಕು. ಈ ಹಬ್ಬದ ಸಂಭ್ರಮವನ್ನು ಹೆಚ್ಚಿಸಬೇಕು. ಹಾಗೇ ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಉತ್ಪನ್ನಗಳಿಗೆ ಬ್ರಾಂಡ್ ಸ್ವರೂಪ ನೀಡಿ ಉದ್ಯಮಿಗಳಾಗುವುದಕ್ಕೆ ಅವಕಾಶಗಳಿವೆ. ಸಂಕ್ರಾಂತಿಯ ಸಂಕೃಷಿಯ ಅಸ್ಮಿತೆ ಉಳಿಸಿ ಬೆಳೆಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯಯುವಜನರು ಉದ್ಯೋಗವನ್ನರಸಿಕೊಂಡು ನಗರಗಳಿಗೆ ವಲಸೆ ಹೋಗದೆ ಹಳ್ಳಿಗಳಲ್ಲೇ ಉಳಿದು ಕೃಷಿಯನ್ನು ಜೀವನಾಧಾರವಾಗಿ ರೂಢಿಸಿಕೊಳ್ಳಬೇಕು ಎಂದು ಪರಿವರ್ತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪುಟ್ಟೇಗೌಡ ಹೇಳಿದರು.
ನಗರದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹಳ್ಳಿಗಳಲ್ಲಿ ರೈತ ಬೆಳೆ ಬೆಳೆದು ಪೂಜಿಸುವ ಮೂಲಕ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸುತ್ತಿದ್ದೇವೆ. ಇದನ್ನು ಯುವ ಪೀಳಿಗೆಯು ಮುಂದುವರಿಸಬೇಕು. ಈ ಹಬ್ಬದ ಸಂಭ್ರಮವನ್ನು ಹೆಚ್ಚಿಸಬೇಕು ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ, ರೈತರ ಬದುಕನ್ನು ಹಸನು ಮಾಡಲು ರೈತ ಉತ್ಪಾದಕರ ಕಂಪನಿಯನ್ನು ಆರಂಭಿಸುತ್ತಿದ್ದೇವೆ, ಯುವಕರಲ್ಲಿ ಕೃಷಿಯ ಮೇಲಿನ ಉತ್ಸಾಹ ಕಡಿಮೆಯಾಗಲು ಕಾರಣವನ್ನು ತಿಳಿಯಬೇಕಿದೆ, ರೈತರನ್ನು ಪ್ರೇರೇಪಿಸುವ ಕೆಲಸವನ್ನು ಮಾಡಲು ಎಲ್ಲರೂ ಮುಂದಾಗುವಂತೆ ಸಲಹೆ ನೀಡಿದರು.
೪೫೦ ವರ್ಷಗಳ ಹಿಂದೆ ಭೂಮಿಯಲ್ಲಿ ನೀರು ಇಂಗಿತ್ತು, ಅದನ್ನು ಇಂದು ನಾವು ೪೫ ವರ್ಷಗಳಲ್ಲಿ ಹೊರತೆಗೆದು ಬರಡು ಮಾಡಿದ್ದೇವೆ ಎಂದು ವಿಷಾದಿಸಿದ ಅವರು, ರೈತರಿಗೆ ಸಹಕಾರಿಯಾಗಲೆಂದು ಸಹಕಾರ ಸಂಘಗಳನ್ನು ಕೆ.ವಿ.ಶಂಕರಗೌಡರ ಕಾಲಘಟ್ಟದಲ್ಲಿ ಸ್ಥಾಪಿಸಿದ್ದರು. ಇಂದು ಹಲವು ಕಾರಣಗಳಿಂದ ಅವು ಕ್ಷೀಣಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಉತ್ಪನ್ನಗಳಿಗೆ ಬ್ರಾಂಡ್ ಸ್ವರೂಪ ನೀಡಿ ಉದ್ಯಮಿಗಳಾಗುವುದಕ್ಕೆ ಅವಕಾಶಗಳಿವೆ. ಸಂಕ್ರಾಂತಿಯ ಸಂಕೃಷಿಯ ಅಸ್ಮಿತೆ ಉಳಿಸಿ ಬೆಳೆಸಬೇಕು ಎಂದರು.
ಇದೇ ವೇಳೆ ಭತ್ತದ ರಾಶಿಗೆ ಪೂಜೆ ಮಾಡಲಾಯಿತು, ನಂತರ ದನಗಳನ್ನು ಕಿಚ್ಚು ಹಾಯಿಸಲಾಯಿತು. ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ನ ಮಹಿಳಾ ಅಧ್ಯಕ್ಷೆ ಸುಜಾತಾ ಸಿದ್ದಯ್ಯ, ರೈತ ಮುಖಂಡರಾದ ಸುನಂದಾ ಜಯರಾಂ, ನಿವೃತ್ತ ಇಂಜಿನಿಯರ್ ಬಸವರಾಜೇಗೌಡ, ಎಸ್.ನಾರಾಯಣ್, ಬಿ.ಎಸ್.ಅನುಪಮಾ, ವೇಣುಗೋಪಾಲ್, ಕಾರಸವಾಡಿ ಮಹದೇವು, ಮಂಜೇಶ್ ಭಾಗವಹಿಸಿದ್ದರು.