೧೫ನೇ ಶತಮಾನದ ಪ್ರಮುಖ ಕವಿಗಳಲ್ಲಿ ಮಹಾಯೋಗಿ ವೇಮನರೂ ಒಬ್ಬರಾಗಿದ್ದರು. ಸಮಾಜದಲ್ಲಿ ಪ್ರತಿಯೊಬ್ಬರೂ ಸುಂದರ ಬದುಕು ಕಟ್ಟಿಕೊಳ್ಳಲು ಇಂತಹ ಜಯಂತಿಗಳು ಅಗತ್ಯ.
ಶಿರಹಟ್ಟಿ: ಮಹಾಯೋಗಿ ವೇಮನರು ತಮ್ಮ ಸರಳ ಸಾಹಿತ್ಯದಿಂದ ಆಚಾರ ವಿಚಾರ, ಜ್ಞಾನ, ಯೋಗ, ಜೀವನ ಮೌಲ್ಯ, ಅಭಿವೃದ್ಧಿ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದರು. ಯುವಜನಾಂಗ ಅವರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ೧೫ನೇ ಶತಮಾನದ ಪ್ರಮುಖ ಕವಿಗಳಲ್ಲಿ ಮಹಾಯೋಗಿ ವೇಮನರೂ ಒಬ್ಬರಾಗಿದ್ದರು. ಸಮಾಜದಲ್ಲಿ ಪ್ರತಿಯೊಬ್ಬರೂ ಸುಂದರ ಬದುಕು ಕಟ್ಟಿಕೊಳ್ಳಲು ಇಂತಹ ಜಯಂತಿಗಳು ಅಗತ್ಯ. ಉತ್ತಮ ಗುಣಗಳ ಅಳವಡಿಕೆಗೆ ದಾರ್ಶನಿಕರ ಜಯಂತಿ ಆಚರಣೆಗಳು ಅಗತ್ಯ. ಪ್ರತಿಯೊಬ್ಬರೂ ವಿದ್ಯೆ ಜತೆಗೆ ನೈತಿಕ ಮೌಲ್ಯ ಮೈಗೂಡಿಸಿಕೊಳ್ಳಬೇಕಿದೆ ಎಂದರು.ಪ್ರಸ್ತುತ ನಾವೆಲ್ಲರೂ ವೈಜ್ಞಾನಿಕವಾಗಿ ಆಕಾಶದೆತ್ತರಕ್ಕೆ ಬೆಳೆದರೂ ಸಾಂಸ್ಕೃತಿಕವಾಗಿ ಅಧಃಪತನಕ್ಕೆ ಇಳಿಯುತ್ತಿದ್ದೇವೆ. ಪ್ರೀತಿ, ಸ್ನೇಹ, ವಿಶ್ವಾಸ, ಬದುಕಿನಲ್ಲಿ ಅರ್ಥ ಕಳೆದುಕೊಂಡು ಕಾಣೆಯಾಗಿವೆ. ಅವುಗಳನ್ನು ಯುವಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ವಚನಕಾರರ, ದಾಸರ, ಸಂತ ಹಾಗೂ ಶರಣರ ಮೌಲ್ಯಗಳನ್ನು ತಿಳಿದುಕೊಳ್ಳುವುದನ್ನು ಬಿಟ್ಟು ಯುವಕರು ಮೊಬೈಲ್ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ಮುಖಂಡರಾದ ತಿಮ್ಮರಡ್ಡಿ ಅಳವಂಡಿ, ಎನ್.ಎನ್. ಗೋಕಾವಿ ಮಾತನಾಡಿ, ಮಹಾಯೋಗಿ ವೇಮನರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಯುವಪೀಳಿಗೆಗೆ ವೇಮನರ ಸಂದೇಶಗಳು, ಜೀವನ ಮೌಲ್ಯಗಳನ್ನು ತಲುಪಿಸಲು ಪಠ್ಯಪುಸ್ತಕದಲ್ಲಿ ಅಳವಡಿಸಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಸೇರಿದಂತೆ ಅನೇಕ ಸಂತರ ಜೀವನ ಚರಿತ್ರೆ ಎಲ್ಲರಿಗೂ ತಿಳಿಯಬೇಕು. ಮಹಾನ್ ವ್ಯಕ್ತಿಗಳು ಪರೋಪಕಾರಿ ಜೀವನ ನಡೆಸಿ ಪರರ ಹಿತಕ್ಕಾಗಿ ಶ್ರಮಿಸುವಂತೆ ತಿಳಿಸಿದ್ದು, ಅವರ ಆದರ್ಶ ಪಾಲನೆಗೆ ಸರ್ವರೂ ಮುಂದಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಿ.ಟಿ. ಮುಂಡವಾಡ, ಲಕ್ಷ್ಮಣಗೌಡ ಪಾಟೀಲ, ಅಜ್ಜು ಪಾಟೀಲ, ಜಗದೀಶಗೌಡ ಪಾಟೀಲ, ಸಂತೋಷ ಮೇಕಳಿ, ನಾಗನಗೌಡ ಪಾಟೀಲ, ಶಂಕ್ರಪ್ಪ ನೀರಲಗಿ, ಚಂದ್ರು ರಡ್ಡೇರ, ಮುದಕಪ್ಪ ರಡ್ಡೇರ, ಮಲ್ಲಿಕಾರ್ಜುನ ರಡ್ಡೇರ, ಎಚ್.ಜೆ. ಭಾವಿಕಟ್ಟಿ, ಸಂತೋಷ ಅಸ್ಕಿ, ವಿನೋದ ಪಾಟೀಲ, ರಾಧಾ ದೇಸಾಯಪಟ್ಟಿ ಸೇರಿ ಅನೇಕರು ಇದ್ದರು.