ಸಾರಾಂಶ
ರಾಮನಗರ: ಕುಮಾರಸ್ವಾಮಿ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಮಾತನಾಡಿದವರನ್ನು ಸರ್ವನಾಶ ಮಾಡಿಕೊಂಡೇ ಬಂದಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಈ ಭೂಮಿ ಮೇಲೆ ಅವರೇ ಇರಲಿ, ನಾವೆಲ್ಲ ಸರ್ವನಾಶ ಆಗುತ್ತೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಹೆಸರು ಬದಲಾವಣೆ ಮಾಡಿದರೆ ಸರ್ವನಾಶ ಆಗುತ್ತಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿ, ಜಿಲ್ಲೆಯ ಹೆಸರು ಮರುನಾಮಕರಣ ವಿಚಾರ ಈಗಾಗಲೇ ಸಚಿವ ಸಂಪುಟದಲ್ಲಿ ಅಂಗೀಕಾರವಾಗಿದೆ. ಗೆಜೆಟ್‌ನಲ್ಲಿ ಮಾತ್ರ ಅಂಗೀಕಾರ ಬಾಕಿ ಇದೆ ಎಂದರು.ಜಿಲ್ಲೆ ಹೆಸರು ಮರುನಾಮಕರಣ ಮಾಡದಂತೆ ರಾಜ್ಯಪಾಲರಿಗೆ ಸಂಘಟನೆಗಳಿಂದ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರವರ ಅಭಿಪ್ರಾಯ ಅವರು ವ್ಯಕ್ತಪಡಿಸುತ್ತಾರೆ. ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ರಾಜಕೀಯ ತೀರ್ಮಾನಗಳಾದಾಗ ಪರ, ವಿರೋಧಗಳು ಇರುತ್ತವೆ. ನಾವೆಲ್ಲ ಹುಟ್ಟಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಇತ್ತು. ಮಧ್ಯದಲ್ಲಿ ಜಿಲ್ಲೆ ವಿಭಾಗವಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೮ ತಾಲೂಕುಗಳಿದ್ದವು. ನಾಲ್ಕು ನಾಲ್ಕು ತಾಲೂಕುಗಳಾಗಿ ವಿಂಗಡಣೆ ಮಾಡಿದರು. ರಾಮನಗರ ಜಿಲ್ಲಾ ಕೇಂದ್ರ ಮಾಡಿ ಬೆಂಗಳೂರು ದಕ್ಷಿಣ ಅಂತ ಹೆಸರಿಡಿ ಅಂತ ಮನವಿ ಮಾಡಿದೆವು. ಆದರೆ ಅದು ಆಗಲಿಲ್ಲ ಎಂದರು.
ಅದು ರೇವಣ್ಣ ತೀರ್ಮಾನ:ಕೆಂಪೇಗೌಡರ ನಾಡು, ನಮಗೂ ಆ ಹೆಸರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಹೆಸರು ಬದಲಾಯಿಸಬೇಡಿ ಅಂದ್ವಿ. ಅಂದು ಸಚಿವರಾಗಿದ್ದ ಎಚ್.ಡಿ.ರೇವಣ್ಣ ನಮ್ಮ ಮಾತಿಗೆ ಮರ್ಯಾದೆ ಕೊಡದೆ ಹೆಸರು ಬದಲಾಯಿಸಿದರು. ಈಗ ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದೇವೆ. ಅಂದು ಹೆಸರು ಬದಲಾವಣೆ ಮಾಡಿದ್ದು ಕುಮಾರಸ್ವಾಮಿ ಅಲ್ಲ, ಎಚ್.ಡಿ.ರೇವಣ್ಣ. ಅಂದು ಏನೇ ತೀರ್ಮಾನ ಆಗಬೇಕಿದ್ದರೂ ರೇವಣ್ಣ ಅವರ ಮಾತು ನಡೆಯುತ್ತಿತ್ತು. ಹೀಗಾಗಿ ಕುಮಾರಸ್ವಾಮಿ ತೀರ್ಮಾನ ಅಂತಿಮ ಆಗುತ್ತಿರಲಿಲ್ಲ. ಕುಮಾರಸ್ವಾಮಿ ಆ ವಿಚಾರಕ್ಕೆಲ್ಲ ತಲೆ ಕೂಡ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದರು.
ಬಿಜೆಪಿ ನಾಯಕರು ಹತಾಶರಾಗಿದ್ದಾರೆ:ಮೂಡ, ವಾಲ್ಮಿಕಿ ಹಗರಣ ವಿರುದ್ಧ ಮೈತ್ರಿ ಪಕ್ಷದ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ರಾಜ್ಯದಲ್ಲಿ ಭದ್ರ ಬುನಾದಿ ಹಾಕುತ್ತಿದೆ. ಈ ವಿಚಾರಕ್ಕಾಗಿ ಕೇಂದ್ರ ನಾಯಕರು ಬರುತ್ತಾರೆ. ಅಂದರೆ ಎಷ್ಟು ಹತಾಶರಾಗಿದ್ದಾರೆ ಅಂತ ತಿಳಿದುಕೊಳ್ಳಬೇಕು. ಹೀಗಾಗಲೇ ಕಾರು ರ್‍ಯಾಲಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಒಂದೇ ವಿಚಾರವಾಗಿ ಎರಡೆರಡು ಬಾರಿ ಪ್ರತಿಭಟನೆ ಮಾಡೋದು ಎಷ್ಟು ಸೂಕ್ತ ಅಂತ ಅರ್ಥ ಮಾಡಿಕೊಳ್ಳಬೇಕು ಎಂದರು.
ನಾಳೆ ಪಾದಯಾತ್ರೆ, ಆಮೇಲೆ ಉರುಳು ಸೇವೆ, ಸ್ಕೂಟರ್ ರ್‍ಯಾಲಿ ಮಾಡಲಿ, ಅವರು ಹೇಳಿದ್ದನ್ನ ನಾವು ಕೇಳಬೇಕು ಅಂತನೇಲ್ಲ. ಅವರ ಸರ್ಕಾರದಲ್ಲಿ ನಡೆದ ಹಗರಣದ ಬಗ್ಗೆ ನಾವು ಎಷ್ಟು ಬಾರಿ ಸಿಬಿಐಗೆ ವಹಿಸುವಂತೆ ಕೇಳಿದ್ವಿ. ಆಗ ಅವರು ಏನ್ ಹೇಳಿದ್ದರು. ಅವರ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಹಾಗಂತ ಸರ್ಕಾರ ಅವರು ಹೇಳಿದ್ದನ್ನ ಕೇಳಕ್ಕಾಗಲ್ಲ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಉತ್ತರ ಸಿಗುತ್ತದೆ. ಆದರೆ ಇವರು ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.ಪೊಟೋ೨೯ಸಿಪಿಟಿ೫: ಬಾಲಕೃಷ್ಣ.