ಸಾರಾಂಶ
ಪರಶುರಾಮ ಪ್ರತಿಮೆ ಕಂಚಿನಿಂದ ತಯಾರಾಗದೆ ವಂಚನೆ, ನಂಬಿಕೆ ದ್ರೋಹ, ಒಳಸಂಚು ಹಾಗೂ ಸಾಕ್ಷಿನಾಶದ ಆರೋಪಗಳ ಮೇಲೆ ಪೋಲೀಸರು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ಪ್ರತಿಮೆಯ ನೈಜತೆಗೆ ಸಾಕ್ಷ್ಯಾಧಾರಿತ ಉತ್ತರ ನೀಡಿದಂತಾಗಿದೆ. ಆದರೆ ಇನ್ನೂ ಕೆಲವರು ಈ ಬಗ್ಗೆ ಸಮರ್ಥನೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರ್ಕಳ: ಪರಶುರಾಮನ ಪ್ರತಿಮೆ ಕಂಚಿನಿಂದ ನಿರ್ಮಾಣವಾಗಿಲ್ಲ ಎಂಬ ಸಂಗತಿ ಸಾಬೀತಾದ ನಂತರವೂ ಕೆಲ ಬಿಜೆಪಿ ನಾಯಕರು ಸಮರ್ಥನೆ ನೀಡುತ್ತಿರುವುದು ಧರ್ಮದ್ರೋಹಕ್ಕೆ ಸಮಾನವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರು ಪ್ರಕಟಣೆಯಲ್ಲಿ, ಪರಶುರಾಮ ಪ್ರತಿಮೆ ಕಂಚಿನಿಂದ ತಯಾರಾಗದೆ ವಂಚನೆ, ನಂಬಿಕೆ ದ್ರೋಹ, ಒಳಸಂಚು ಹಾಗೂ ಸಾಕ್ಷಿನಾಶದ ಆರೋಪಗಳ ಮೇಲೆ ಪೋಲೀಸರು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ಪ್ರತಿಮೆಯ ನೈಜತೆಗೆ ಸಾಕ್ಷ್ಯಾಧಾರಿತ ಉತ್ತರ ನೀಡಿದಂತಾಗಿದೆ. ಆದರೆ ಇನ್ನೂ ಕೆಲವರು ಈ ಬಗ್ಗೆ ಸಮರ್ಥನೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕಾರಿಯಾಗಿದೆ ಎಂದರು.ಪ್ರತಿಮೆ ಕಂಚಿನದ್ದೇ ಎನ್ನುವ ಧೈರ್ಯ ಮತ್ತು ನಂಬಿಕೆ ಬಿಜೆಪಿಯವರಿಗೆ ಇದ್ದರೆ ಬೈಲೂರಿನ ಮಾರಿಗುಡಿಗೆ ಬಂದು ದೇವರ ಮುಂದೆ ಪ್ರಮಾಣಿಸಲಿ. ನಾವು ಪ್ರತಿಮೆ ಫೈಬರ್‌ನಿಂದ ತಯಾರಿಸಲಾಗಿದೆ ಎಂಬುದನ್ನು ದೇವರ ಮುಂದೆ ಹೇಳಲು ಸಿದ್ಧರಿದ್ದೇವೆ ಎಂದು ಅವರು ಸವಾಲು ಹಾಕಿದ್ದಾರೆ.ಪ್ರತಿಮೆಯ ಮೇಲ್ಭಾಗ ನಾಲ್ಕು ತಿಂಗಳ ಕಾಲ ಅಡಗಿಸಿಡಲಾಗಿದ್ದು, ಅದು ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಇದು ಸಾಕ್ಷಿ ನಾಶವಲ್ಲದೆ ಮತ್ತೇನು? ಎಲ್ಲಿ ಅದನ್ನು ಅಡಗಿಸಲಾಗಿತ್ತು? ಏನು ಮಾಡಲಾಗಿದೆ ಎಂಬುದೂ ಬಹಿರಂಗವಾಗಬೇಕು ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದೇ ಅಲ್ಲ ಎಂಬ ಆರೋಪ ಈಗ ಸತ್ಯವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಧ ಭಾಗವೂ ಫೈಬರ್‌ನದ್ದೆ ಎಂಬುದೂ ಹೊರಬರುತ್ತದೆ. ಕಾರ್ಯಕರ್ತರಿಗೆ ತೃಪ್ತಿ ನೀಡುವ ಹೇಳಿಕೆಗಳಿಂದ ಸತ್ಯ ಮುಚ್ಚಲಾಗುವುದಿಲ್ಲ. ಈ ವಿವಾದಕ್ಕೆ ಇಂದೇ ಅಂತ್ಯವಾಗಲಿ. ಧೈರ್ಯವಿದ್ದರೆ ದೇವರ ಮುಂದೆ ನಿಂತು ಪ್ರಮಾಣಿಸೋಣ ಎಂದು ಸವಾಲು ಹಾಕಿದರು.