ಗೋಸೇವೆಗಾಗಿ ಕೇಂದ್ರೀಯ ಕಾನೂನನ್ನು, ಕೇಂದ್ರೀಯ ಸಚಿವಾಲಯವನ್ನು ಜಾರಿಗೆ ತರಬೇಕು. ಗೋಚರ ಮಂಡಳಿಯನ್ನು ರಚಿಸಬೆಕು. ಗೋ ಆಧರಿತ ಕೃಷಿಯನ್ನು ನಡೆಸಬೇಕು.
ಸಿದ್ದಾಪುರ: ದೇಶ ಮತ್ತು ಭಾರತೀಯ ಸಂಸ್ಕೃತಿಯ ಹಿತದೃಷ್ಟಿಯಿಂದ ಸಂವಿಧಾನದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಭಾರತೀಯ ತಳಿಯ ಗೋವುಗಳಿಗೆ ರಾಷ್ಟ್ರೀಯ ಗೌರವ ನೀಡುವಂತೆ ಕೋರಿಕೊಳ್ಳುವುದು ಈ ಅಭಿಯಾನದ ಉದ್ದೇಶವಾಗಿದೆ. ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧ ಮಾಡಬೇಕು. ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡುವಂತಾಗಬೇಕು ಎಂದು ಬೆಂಗಳೂರಿನ ಆರೂಢಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಗೋಮಾತೆಯ ಗೌರವ ಅಭಿಯಾನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು. ಗೋಸೇವೆಗಾಗಿ ಕೇಂದ್ರೀಯ ಕಾನೂನನ್ನು, ಕೇಂದ್ರೀಯ ಸಚಿವಾಲಯವನ್ನು ಜಾರಿಗೆ ತರಬೇಕು. ಗೋಚರ ಮಂಡಳಿಯನ್ನು ರಚಿಸಬೆಕು. ಗೋ ಆಧರಿತ ಕೃಷಿಯನ್ನು ನಡೆಸಬೇಕು. ಪಂಚಗವ್ಯದ ಉತ್ಪಾದನೆ, ಮಾರುಕಟ್ಟೆ ವೃದ್ಧಿಸಬೇಕು. ಗೋಹತ್ಯಾ ನಿಷೇಧ, ಗೋಸಂರಕ್ಷಣೆಗಾಗಿ ಈ ಹಿಂದೆ ೨೦ ಕೋಟಿ ಸಹಿ ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಇದೀಗ ಪುನಃ ಅಭಿಯಾನ ನಡೆಸುತ್ತಿದ್ದು, ೩೧ ಕೋಟಿ ಸಹಿ ಸಂಗ್ರಹಿಸಿ ಸಮರ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಭಿಯಾನಕ್ಕಾಗಿ ಯಾರಿಂದಲೂ ದೇಣಿಗೆ ಸಂಗ್ರಹಿಸುತ್ತಿಲ್ಲ, ಸ್ವಪ್ರೇರಣೆಯಿಂದ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ರಾಜಸ್ಥಾನ ಪಥಮೇಡಾದ ಪ್ರಾಣಪತಿ ರವೀಂದ್ರಾನಂದ ಸರಸ್ವತಿ ಮಹಾರಾಜ ಮಾತನಾಡಿ, ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ನೀರು, ಭೂಮಿ, ವಾತಾವರಣ ಕಲುಷಿತವಾಗಿದೆ. ಹವಾಮಾನ ಹಾಗೂ ಮಳೆಯಲ್ಲಿ ವೈಪರೀತ್ಯವಾಗುತ್ತಿದೆ. ಹಿಂದೆ ಋಷಿಮುನಿಗಳು ಹಾಕಿಕೊಟ್ಟ ಜೀವನ ಪದ್ಧತಿಯನ್ನು ಅನುಸರಿಸುವಂತಾಗಬೇಕು. ಗೋಹತ್ಯಾ ನಿಷೇಧದಿಂದ ದೇಶೀಯ ತಳಿಗಳ ಸಂವರ್ಧನೆ ಜತೆಗೆ ಪರಿಶುದ್ಧ ಬೆಳೆ ಪಡೆಯಲು ಸಾಧ್ಯ. ಈ ಹಿನ್ನೆಲೆ ಗೋಮಾತೆಯ ಸಂರಕ್ಷಣೆಗಾಗಿ ಪ್ರತಿಯೊಬ್ಬ ಭಾರತೀಯನೂ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ಎಸ್. ಹೆಗಡೆ ಹರಗಿ, ಕೆ.ಪಿ. ಎಡಪ್ಪಾಡಿ, ರವಿ ಹೆಗಡೆ ಹೂವಿನಮನೆ, ಪಿ.ಬಿ. ಹೊಸೂರ ಸೇರಿದಂತೆ ಪ್ಯಾಸೆಂಜರ್ ಆಟೋ ಚಾಲಕ ಮಾಲೀಕ ಸಂಘದವರು, ಲಯನ್ಸ್ ಪದಾಧಿಕಾರಿಗಳು, ನಿವೃತ್ತ ನೌಕರರ ಸಂಘದವರು ಸಾರ್ವಜನಿಕರು ಪಾಲ್ಗೊಂಡಿದ್ದರು.