ಸಾರಾಂಶ
ನನ್ನ ಮಗ ಗೆಲ್ಲುವುದು ನಿಶ್ಚಿತ
ಕನ್ನಡಪ್ರಭ ವಾರ್ತೆ ಹಾಸನಈಗಾಗಲೇ ಎಲ್ಲಾ ಕಡೆ ಚರ್ಚೆಯಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಕುರಿತು ಸಮಗ್ರ ತನಿಖೆ ಆಗಬೇಕು. ಬೇರೆ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮಾ ಅಸಮಧಾನ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೇ ಜಿ. ದೇವರಾಜೇಗೌಡ ಆಗಿರುವುದರಿಂದ ಪೆನ್‌ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಅವರು ಏಕೆ ಈ ವಿಡಿಯೋಗಳನ್ನು ಬಹಿರಂಗ ಮಾಡಿರಬಾರದು ಎಂದು ಅನುಮಾನ ವ್ಯಕ್ತಪಡಿಸಿದರು.‘ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಮ್ಮ ಮಾವ ೧೯೯೯ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೇ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿರುವುದು ಶ್ರೀರಕ್ಷೆ ಆಗಲಿದೆ’ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತಾವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ.