ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಲಿ: ಸ್ವಾಮಿದಾಸ

| Published : Sep 17 2024, 12:45 AM IST

ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಲಿ: ಸ್ವಾಮಿದಾಸ
Share this Article
  • FB
  • TW
  • Linkdin
  • Email

ಸಾರಾಂಶ

ಕಲಂ 371ಜೆ ತಿದ್ದುಪಡಿಯಾಗಿ ಜಾರಿಗೆ ಬಂದು ಹತ್ತು ವರ್ಷಗಳು ಗತಿಸಿದರೂ ಅದನ್ನು ಸಮರ್ಪಕವಾಗಿ ಜಾರಿ ಮಾಡದೆ ಆಳುವ ಸರ್ಕಾರಗಳು ಗಾಢ ನಿದ್ರೆಗೆ ಜಾರಿವೆ.

ಕನ್ನಡಪ್ರಭ ವಾರ್ತೆ ಬೀದರ್‌

ಕಲಂ 371ಜೆ ತಿದ್ದುಪಡಿಯಾಗಿ ಜಾರಿಗೆ ಬಂದು ಹತ್ತು ವರ್ಷಗಳು ಗತಿಸಿದರೂ ಅದನ್ನು ಸಮರ್ಪಕವಾಗಿ ಜಾರಿ ಮಾಡದೆ ಆಳುವ ಸರ್ಕಾರಗಳು ಗಾಢ ನಿದ್ರೆಗೆ ಜಾರಿವೆ. ಹತ್ತು ವರ್ಷಗಳ ನಂತರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನೀಲಿ ನಕ್ಷೆ ತಯಾರಿಸಲು ಈಗ ಅಂಬೆಗಾಲು ಹಾಕುತ್ತಿರುವ ಸರ್ಕಾರದ ನೀತಿ ಖಂಡನೀಯ ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್‌ ಕೆಂಪೆನೋರ್‌ ತಿಳಿಸಿದರು.

ಅವರು, ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯಿಂದ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬೀದರ್‌ ಕಾರಂಜಾ ಸಂತ್ರಸ್ತರ ಸಮಸ್ಯೆ, ಜಿಲ್ಲಾ ಸಂಕೀರ್ಣ, ಮಿನಿ ವಿಧಾನಸೌಧ ಕಟ್ಟಡ, ಸರ್ಕಾರಿ ನೌಕರರಿಗೆ ಸೇವಾ ಹಿರಿತನದಲ್ಲಿ ಮುಂಬಡ್ತಿ, ಕೈಗಾರಿಕಾ ನೀತಿ ಜಾರಿ, ಕೃಷಿ, ನೀರಾವರಿ ಯೋಜನೆ, ಶೈಕ್ಷಣಿಕ, ಸ್ವಾವಲಂಬನೆ ವಿಷಯದಲ್ಲಿ ಈ ಭಾಗವು ಹಿಂದುಳಿಯಲು ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.

ಬಿಎಸ್‌ಎಸ್‌ಕೆ ಬಂದ್‌ ಮಾಡಲಾಯಿತು. ಜಿಲ್ಲೆ ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರದ ಕೆಟಿಟಿಪಿ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದು, 2018-19ರಲ್ಲಿ ಜಿ+3 ಯೋಜನೆಯಡಿಯಲ್ಲಿ ಬೀದರ್‌ ಬಸವಕಲ್ಯಾಣ ತಾಲೂಕಿನ ಬಡ ಜನರಿಗಾಗಿ ವಸತಿ ಯೋಜನೆಯಡಿ ಜಿಲ್ಲೆಗೆ ಬಂದ 4200 ಮನೆಗಳು ವಾಪಸ್‌ ಹೋಗಿವೆ. ಅರ್ಜಿ ಹಾಕಿದ ಬಡವರು ಕನಸು ಕಾಣುತ್ತ ಕುಳಿತ್ತಿದ್ದಾರೆ. ಕೂಡಲೇ ಸರ್ಕಾರ ಮನೆಗಳನ್ನು ನಿರ್ಮಿಸಿ, ಆ ಮನೆಗಳ ಕೀಲಿಕೈಯನ್ನು ಫಲಾನುಭವಿಗಳಿಗೆ ನೀಡಬೇಕು. ಕೆಐಎಡಿಬಿ ಹೌಸಿಂಗ್‌ ಪ್ರದೇಶದಲ್ಲಿ ಕೈಗಾರಿಕೋದ್ಯಮಿಗಳಿಗೆ ಮಾತ್ರ ಮಳಿಗೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಜೆಜೆಎಂ ಕಾಮಗಾರಿ ಉನ್ನತ ಮಟ್ಟದ ತನಿಖೆ ನಡೆಯಬೇಕು. ಜಿಲ್ಲಾ ಸಂಕೀರ್ಣ ಕಾಮಗಾರಿ ತತಕ್ಷಣ ಆರಂಭ ಮಾಡಬೇಕು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮೂರ್ತಿ ಸ್ಥಾಪನೆಯಾಗಬೇಕು ಎಂದರಲ್ಲದೆ ಜಿಲ್ಲೆಯಲ್ಲಿ ಇಬ್ಬಿಬ್ಬರು ಮಂತ್ರಿಗಳಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗದೇ ಇರುವುದು ಬೇಸರವಾಗಿದೆ. ಆದ್ದರಿಂದ ಕಲಬುರಗಿಯಲ್ಲಿ ಸೆ.17ರಂದು ನಡೆಯುವ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆಯಾಗಬೇಕು. ಜಿಲ್ಲೆಯ ಸಮಸ್ಯೆಗಳಿಗೆ ಇತಿಶ್ರೀ ಹಾಡಲು 15ದಿನಗಳೊಳಗಾಗಿ ಸಚಿವದ್ವಯರು ಪ್ರಯತ್ನಿಸಬೇಕು. ಈ ವಿಷಯಗಳನ್ನು ಅನುಷ್ಠಾನಕ್ಕೆ ತರದೇ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಪೌರಾಡಳಿತ ಸಚಿವರ ಪ್ರತಿಕೃತಿ ದಹನ ಮಾಡಲಾಗುವುದೆಂದು ಸ್ವಾಮಿದಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೇನೆಯ ಸಂಸ್ಥಾಪಕ ಕಾರ್ಯದರ್ಶಿ ಸಂಗಮೇಶ ಏಣಕೂರ, ಜಿಲ್ಲಾ ಉಪಾಧ್ಯಕ್ಷ ಅಂಬಾದಾಸ್‌ ಬೇಲೂರ, ಜಿಲ್ಲಾ ಸಂಯೋಜಕ ಶಿವರಾಜ ನೆಲವಾಳಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೇಮ್ಸ್‌ ಇಸ್ಲಾಂಪೂರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಮಲಹಾಸನ ಭಾವಿದೊಡ್ಡಿ, ಪ್ರಮುಖರಾದ ಸೀಮನ ಕಂಗಟಿ, ಯೇಶಪ್ಪ ಶೆಂಬೆಳ್ಳಿ, ಸೂರ್ಯಕಾಂತ ಬೇಲೂರ, ಸಂಜೀವಕುಮಾರ ಗೋರನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.