ಕಲಬುರಗಿ ಅಭಿವೃದ್ಧಿ ಆಗಿದೆಯೆ ಅನ್ನೋದು ಚರ್ಚೆಯಾಗಲಿ: ವಿಜಯೇಂದ್ರ

| Published : May 01 2024, 01:26 AM IST

ಕಲಬುರಗಿ ಅಭಿವೃದ್ಧಿ ಆಗಿದೆಯೆ ಅನ್ನೋದು ಚರ್ಚೆಯಾಗಲಿ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಕಲಬುರಗಿ ಹೆಣ್ಣಿನ ಜೊತೆ ಮದುವೆ ಮಾಡಿಸಿದ್ದಾರೆ, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಿಮ್ಮೂರ ಅಳಿಯನಾಗಿ ನಿಮ್ಮೆದುರು ಮಾತನಾಡಲು ಹೆಮ್ಮೆ ಎನಿಸುತ್ತಿದೆ: ಬಿ.ವೈ. ವಿಜಯೇಂದ್ರ

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಂಗಳವಾರ ಕಮಲಾಪುರ ಮತಕ್ಷೇತ್ರದಲ್ಲಿ ರೋಡ್‌ ಷೋ ನಡೆಸಿ ಸಮಾರಂಭದಲ್ಲಿ ಪಾಲ್ಗೊಂಡು ಬಿಜೆಪಿ ಉಮೇದುವಾರ ಡಾ. ಉಮೇಶ್‌ ಜಾಧವ್‌ ಪರ ಮತಬೇಟೆ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕಮಲಾಪುರದ ಕೆಂಪು ಬಾಳೆ ನೀಡಿ ಶಾಸಕ ಬಸವರಾಜ ಮತ್ತಿಮಡು ಅವರು ಸ್ವಾಗತ ಕೋರಿದರು.

ಕಮಲಾಪುರ ಹೊರವಲಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ ಅವರು, ಕಲಬುರಗಿ ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧ ಇದೆ, ಈ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಯಡಿಯೂರಪ್ಪನವರು ನಮಗೆ ಕಲಬುರಗಿ ಹೆಣ್ಣಿನ ಜೊತೆ ಮದುವೆ ಮಾಡಿಸಿದ್ದಾರೆ, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಿಮ್ಮೂರ ಅಳಿಯನಾಗಿ ನಿಮ್ಮೆದುರು ಮಾತನಾಡಲು ಹೆಮ್ಮೆ ಎನಿಸುತ್ತಿದೆ ಎಂದರು.

ಯಾರು ಯಾರ ಅಳಿಯ ಎನ್ನುವುದು ಮುಖ್ಯವಲ್ಲ. ಈ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದು ಹೇಳುತ್ತಲೇ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಟೀಕಿಸಿದ ವಿಜಯೇಂದ್ರ, ನಲವತ್ತು ಐವತ್ತು ವರ್ಷದಿಂದ ಈ ಭಾಗದಿಂದ ಅಧಿಕಾರ ಹಿಡಿದವರಿಂದ ಈ ಭಾಗದ ಅಭಿವೃದ್ಧಿ ಆಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಈ ಭಾಗದಲ್ಲಿ ಅಭಿವೃದ್ದಿ ಕೆಲಸಗಳಾಗಿವೆ ಎಂದರು.

ಕಾಂಗ್ರೆಸ್ ನವರು ಗ್ಯಾರಂಟಿ ಸ್ಕೀಂಗಳನ್ನು ಪುಕ್ಕಟ್ಟೆಯಾಗಿ ಕೊಟ್ಟಿಲ್ಲ, ಒಂದೆಡೆ ಸರಾಯಿ ದರ ಹೆಚ್ಚಳ ಮಾಡಿ ಗಂಡಸರಿಂದ ಹಣ ವಸೂಲಿ ಮಾಡಿ ನಿಮ್ಮ ಹಣ ನಿಮಗೇ ಕೊಡುತ್ತಿದ್ದಾರೆಂದು ಪಂಚ ಗ್ಯರಂಟಿಗಳ ರಹಸ್ಯ ತೆರೆದಿಟ್ಟರು.

ಪ್ರಚಾರ ಸಭೆಯಲ್ಲಿ ಶಾಸಕ ಬಸವರಾಜ್ ಮತ್ತಿಮೂಡ್, ಡಾ. ಉಮೇಶ್ ಜಾಧವ್, ಚಂದು ಪಾಟೀಲ್ ಸೇರಿದಂತೆ ಅನೇಕರಿದ್ದರು.