ಜಿಲ್ಲೆಗೊಂದು ಲೋಕಸಭೆ, ತಾಲೂಕಿಗೊಂದು ವಿಧಾನಸಭೆ ಆಗಲಿ

| Published : Jan 27 2025, 12:46 AM IST

ಸಾರಾಂಶ

ಯಳಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ೭೬ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪ್ರತಿ ಜಿಲ್ಲೆಗೊಂದು ಲೋಕಸಭಾ ಕ್ಷೇತ್ರ ಹಾಗೂ ಪ್ರತಿ ತಾಲೂಕಿಗೊಂದು ವಿಧಾನಸಭಾ ಕ್ಷೇತ್ರವಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಲಭವಾಗಿ ಸಾರ್ವಜನಿಕರ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಏಕ ಮತದಾನ ಪದ್ಧತಿ ಜಾರಿಗೆ ತರಲು ಹೊರಟಿರುವ ಸರ್ಕಾರ ಪ್ರತಿ ಜಿಲ್ಲೆಗೊಂದು ಲೋಕಸಭಾ ಕ್ಷೇತ್ರ ಮಾಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಡೆ ಚಿಂತನೆ ನಡೆಸಬಹುದು, ತಾಲೂಕಿಗೊಂದು ವಿಧಾನಸಭಾ ಕ್ಷೇತ್ರವಾದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬಹುದು. ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರ ಮೂರು ತಾಲೂಕುಗಳಲ್ಲಿ ಹಂಚಿ ಹೋಗಿದೆ. ಇದೇ ರೀತಿ ಅನೇಕ ಕ್ಷೇತ್ರಗಳ ಸ್ಥಿತಿ ಇದೆ. ಹೀಗಾದರೆ ಇಲ್ಲಿ ಆಡಳಿತ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ತೊಂದರೆ ಅನುಭವಿಸುವ ಸ್ಥಿತಿ ಇದೆ ಈ ಬದಲಾವಣೆಗೆ ಬಗ್ಗೆ ಚಿಂತಿಸಬೇಕು.ಕ್ಷೇತ್ರ ವ್ಯಾಪ್ತಿಯಲ್ಲಿ ೧೦೦ ಎಕರೆ ಜಮೀನನ್ನು ಸೆಸ್ಕ್‌ರವರು ಕೇಳಿದ್ದು ಇದರಲ್ಲಿ ೬೦ ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾವರ ಹಾಗೂ ೪೦ ಎಕರೆ ಪ್ರದೇಶದಲ್ಲಿ ೪೪೦ ಕೆವಿ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆ. ಈಗಾಗಲೇ ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ೧೧ ಎಕರೆ ಜಮೀನು ಇದಕ್ಕೆ ಗುರುತಿಸಲಾಗಿದೆ. ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ ಜಮೀನು ನೀಡುವಂತೆ ನಾನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಸ್ತೂರು, ಹೊಂಗನೂರು ಹಾಗೂ ಕುದೇರು ಗ್ರಾಮಗಳಿಗೆ ಹೊಸದಾಗಿ ೩ ಕೆಪಿಎಸ್ ಶಾಲೆಗಳು ಮಂಜೂರಾಗಿದೆ. ಇದಕ್ಕೆ ಕಟ್ಟಡ ನಿರ್ಮಿಸಲು ಸ್ಥಳವನ್ನು ಹುಡುಕುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಮೆಳ್ಳಹಳ್ಳಿ ಗೇಟ್ ಬಳಿ ೨ ಎಕರೆ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲು ಸ್ಥಳ ನಿಯೋಜನೆ ಮಾಡಲಾಗಿದೆ. ಪಟ್ಟಣದಲ್ಲಿ ೧೦೦ ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಇಲ್ಲಿದ್ದ ಸಣ್ಣಪುಟ್ಟ ಗೊಂದಲಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಿವಾರಿಸಲಾಗಿದೆ. ಮುಂದಿನ ೧೮ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ ಎಂದರು. ಮುಖ್ಯ ಭಾಷಣಕಾರ ರೆಡಿಯಾಲಜಿ ಇಮೇಜಿಂಗ್ ಅಧಿಕಾರಿ ಸೈಯದ್ ಉವೇಸ್ ಅಹಮ್ಮದ್ ಮಾತನಾಡಿ, ನಮ್ಮ ದೇಶಕ್ಕೆ ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಪ್ರಾತಃ ಸ್ಮರಣೀಯರಾಗಿದ್ದಾರೆ. ನಮ್ಮ ಬದುಕಿನ ಪ್ರತಿ ಕ್ಷಣದಲ್ಲೂ ನಾವು ಸಂವಿಧಾನವಿಲ್ಲದೆ ಬದುಕುವುದು ಅಸಾಧ್ಯವಾಗಿದೆ. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಸಾಧನೆಗಳಿಗೂ ಸಂವಿಧಾನವೇ ಮೂಲವಾಗಿದೆ. ಇಂತಹ ಶ್ರೇಷ್ಟ ಸಂವಿಧಾನ ಪಡೆದ ಭಾರತೀಯರು ಧನ್ಯರಾಗಿದ್ದಾರೆ. ಇಂತಹ ಸಂವಿಧಾನ ಅಳವಡಿಸಿಕೊಂಡಿರುವ ಈ ಪವಿತ್ರ ದಿನವನ್ನು ಎಲ್ಲರೂ ಹಬ್ಬದಂತೆ ಆಚರಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಶೇಷ ಚೇತನ ಮಕ್ಕಳಿಗೆ ಸನ್ಮಾನಿಸಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮನಿಂಗರಾಜು, ಸದಸ್ಯರಾದ ಮಹೇಶ್, ಸವಿತಾ ಬಸವರಾಜು, ಸುಶೀಲಾಪ್ರಕಾಶ್, ಪ್ರಭಾವತಿ ರಾಜಶೇಖರ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ತಹಸೀಲ್ದಾರ್ ಜಯಪ್ರಕಾಶ್, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಬಿಇಒ ಮಾರಯ್ಯ, ಉಪಪ್ರಾಂಶುಪಾಲ ನಂಜುಂಡಯ್ಯ, ಸಿಪಿಐ ಹನುಮಂತಉಪ್ಪಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಸಿಡಿಪಿಒ ಸಕಲೇಶ್ವರ್ ಸೇರಿದಂತೆ ಅನೇಕರು ಇದ್ದರು.