ಸಾರಾಂಶ
ಅಭಿಮಾನ ಈ ತರ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ, ಪ್ರತಿ ವರ್ಷ ಒಂದಿಲ್ಲೊಂದು ಘಟನೆಯಾಗುತ್ತಿದ್ದು ಇದರಿಂದಾಗಿ ನನಗೆ ಬರ್ತಡೇ ಅಂದರೇನೆ ಭಯವಾಗುತ್ತಿದೆ. ನನ್ನ ಬಗ್ಗೆ ನನಗೆ ಅಸಹ್ಯವಾಗುತ್ತಿದೆ ಎಂದು ನಟ ಯಶ್ ಹೇಳಿದರು.
ಲಕ್ಷ್ಮೇಶ್ವರ: ಅಭಿಮಾನ ಈ ತರ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ, ಬ್ಯಾನರ್ ಹಾಕಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದನ್ನು ನಾನು ಯಾವಾಗಲೂ ಒಪ್ಪುವುದಿಲ್ಲ, ಪ್ರತಿ ವರ್ಷ ಒಂದಿಲ್ಲೊಂದು ಘಟನೆಯಾಗುತ್ತಿದ್ದು ಇದರಿಂದಾಗಿ ನನಗೆ ಬರ್ತಡೇ ಅಂದರೇನೆ ಭಯವಾಗುತ್ತಿದೆ. ನನ್ನ ಬಗ್ಗೆ ನನಗೆ ಅಸಹ್ಯವಾಗುತ್ತಿದೆ ಎಂದು ನಟ ಯಶ್ ಹೇಳಿದರು.
ಸೋಮವಾರ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಅವರ ಹುಟ್ಟಹುಬ್ಬದ ಫ್ಲೆಕ್ಸ್ ಅಳವಡಿಸುವ ವೇಳೆಯಲ್ಲಿ ವಿದ್ಯುತ್ ತಗುಲಿ ಸಾವನ್ನಪಿದ್ದ 3 ಯುವಕರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಏನಕ್ಕೆ ಇದೆಲ್ಲಾ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ, ನಿಜವಾಗಿಯೂ ಹೇಳುತ್ತೇನೆ ನಿಜವಾದ ಅಭಿಮಾನಿಗಳಾದರೆ ನೀವು ಎಲ್ಲೋ ದೂರದಲ್ಲಿಯೇ ಕುಳಿತು ಪ್ರೀತಿಯಿಂದ ಹರಸಿದರೆ ಸಾಕು ಅದೇ ನನಗೆ ದೊಡ್ಡ ಉಡುಗೊರೆ.
ನಿಜವಾಗಿ ನಾನು ಬರ್ತಡೇ ಆಚರಿಸದೇ ಇರುವುದಕ್ಕೆ ಈ ರೀತಿಯ ಘಟನೆಗಳೇ ಕಾರಣ. ವರ್ಷದ ಕೊನೆಯಲ್ಲಿ ಕೋವಿಡ್ ಪ್ರಾರಂಭವಾಯಿತು, ಅದಕ್ಕಾಗಿಯೇ ನನ್ನ ಬರ್ತಡೇ ಆಚರಣೆಯಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಬರ್ತಡೇ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೇನೆಂದರು.ನೋಡಿ, ಅಭಿಮಾನಿಗಳಿಗೆ ಬ್ಯಾಡಾ ಅಂದ್ರೂ ಬೇಸರ ಮಾಡಿಕೊಳ್ಳುತ್ತಾರೆ.
ಅವರ ಪ್ರೀತಿ ತೋರಿಸುವುದಕ್ಕೆ ಸಾಕಷ್ಟು ದಾರಿಗಳಿರುತ್ತವೆ. ದುಡ್ಡಿನ ಸಹಾಯ ಯಾರು ಬೇಕಾದರೂ ಮಾಡಬಹುದು. ಆದರೆ ಕಳೆದುಕೊಂಡ ಮಗ ಮರಳಿ ಮನೆಗೆ ಬರತಾನಾ ಹೇಳ್ರೀ... ಮನೆ ಮಕ್ಕಳನ್ನು ಕಳೆದುಕೊಂಡಿರುವ ಪಾಲಕರಿಗೆ ಏನು ಹೇಳಲು ಸಾಧ್ಯ, ನಮ್ಮ ಮನೆಯಲ್ಲಿ ಸಾವಾದ್ರು ಅದು ಸಾವೇ ತಾನೇ.. ಏನ್ ಕೊಟ್ರೂ ಹೋದ ಮಕ್ಕಳು ಮರಳಿ ಬರತಾರಾ..? ಎಂದು ಪ್ರಶ್ನಿಸಿದರು.
ನಾನು ಅಭಿಮಾನಿಗಳಿಗೆ ಕೈ ಮುಗಿದು ಮಾಧ್ಯಮಗಳ ಮೂಲಕ ಪ್ರಾರ್ಥಿಸುತ್ತೇನೆ, ಅಭಿಮಾನ ತೋರಿಸುವುದಕ್ಕೆ ಸಾಕಷ್ಟು ಬೇರೆ ದಾರಿಗಳಿವೆ, ಬ್ಯಾನರ್‌ಗಳನ್ನು ಕಟ್ಟುವುದು, ಬೈಕ್ ಗಳಲ್ಲಿ ಚೇಸ್ ಮಾಡಿಕೊಂಡು ಬರೊದು, ಪೋಟೋ ತೆಗೆಸಿಕೊಳ್ಳೋದೋ ಈ ರೀತಿಯ ಅಭಿಮಾನ ತೋರಿಸಬೇಡಿ ಎಂದು ಮನವಿ ಮಾಡಿದರು.
ನಿಜವಾಗಿ ನೀವು ನನ್ನ ಅಭಿಮಾನಿಗಳಾಗಿದ್ದರೆ ನೀವು ಒಳ್ಳೆಯ ಕೆಲಸ ಮಾಡಿ, ಉತ್ತಮ ಬದುಕು ರೂಪಿಸಿಕೊಳ್ಳಿ, ಅದೇ ನೀವು ನನಗೆ ಕೊಡುವ ದೊಡ್ಡ ಕೊಡುಗೆಯಾಗಿದೆ. ಚಿಕ್ಕ ವಯಸ್ಸಿನಲ್ಲಿ ಇವೆಲ್ಲಾ ಇರುತ್ತವೆ ನಾನು ಕೂಡಾ ಈ ರೀತಿ ಮಾಡುವ ಮನಸ್ಸು ಇರುತ್ತಿತ್ತು, ದೊಡ್ಡವರಾದಂತೆ ಬದಲಾಗಬೇಕು, ನನ್ನ ಬಗ್ಗೆಯೇ ಯೋಚನೆ ಮಾಡಿಕೊಂಡು ನಿಮ್ಮ ಟೈಂ ವೇಸ್ಟ್ ಮಾಡಬೇಡಿ.
ನೀವು ಖುಷಿಯಾಗಿದ್ದರೆ ಅದೇ ನೀವು ನನಗೆ ತೋರಿಸುವ ದೊಡ್ಡ ಉಡುಗೊರೆಯಾಗಿದೆ ಎಂದರು. ಯಾರು ಬೇಜಾರು ಮಾಡಿಕೊಂಡರೂ ಬೇಜಾರಿಲ್ಲ. ನಾನು ನೇರವಾಗಿ ಹೇಳುತ್ತೇನೆ, ನೀವು ಮೊದಲು ನಿಮ್ಮ ತಂದೆ, ತಾಯಿಯ ಮೇಲೆ ಪ್ರೀತಿ ತೋರಿಸಿ, ನಾನು ಇಲ್ಲಿಗೆ ಬಂದಿದ್ದೇನೆ ಎಂದರೆ ಅವರ ತಂದೆ ತಾಯಿಯ ಮೇಲಿರುವ ಗೌರವಕ್ಕೆ, ಇದನ್ನು ಪ್ರತಿಯೊಬ್ಬ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ಈಗ ನಾನು ಬರಬೇಕಾದರೂ ಕೆಲವರು ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರುತ್ತಾರೆ. ಏನಾದರೂ ಆದರೆ ಅವರ ತಂದೆ ತಾಯಿಗೆ ತೊಂದರೆ ಅಲ್ವಾ, ಕಳೆದ ಬಾರಿ ನನ್ನ ಜನ್ಮ ದಿನದ ಅಂಗವಾಗಿ ಯುವಕನೋರ್ವ ಬೆಂಕಿ ಹಾಕಿಕೊಂಡು ಕೈಕಾಲೆಲ್ಲಾ ಸುಟ್ಟುಕೊಂಡು, ಇನ್ನೊಮ್ಮೆ ಬೇರೆ ರೀತಿಯ ಸಮಸ್ಯೆಯಾಯಿತು. ಇದು ಮೂರನೇ ಬಾರಿ ಅದಕ್ಕಾಗಿ ನಾನು ಅಭಿಮಾನಿಗಳಲ್ಲಿ ಕೈ ಮುಗಿದು ಕೇಳುತ್ತೇನೆ. ದಯವಿಟ್ಟು ಅತಿರೇಕರ ವರ್ತನೆ ಬೇಡ ಎಂದು ವಿನಂತಿಸಿದರು.
ಪರಿಹಾರ ಗಮನಿಸಿ ನಿರ್ಧಾರ: ಕುಟುಂಬಸ್ಥರನ್ನು ಭೇಟಿ ಮಾಡಿದ್ದೇನೆ, ಅವರಿಗೆ ಯಾವ ರೀತಿಯ ಪರಿಹಾರದ ಅವಶ್ಯಕತೆ ಇದೆ ಎನ್ನುವುದನ್ನು ಗಮನಿಸಿ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಕ್ಕೆ ಯಶ್ ಆಗುಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರ್ಪಡೆಗೊಂಡಿದ್ದ ಅವರ ಅಭಿಮಾನಿಗಳು ರಾಕಿ ಭಾಯಿ.. ರಾಕಿ ಭಾಯಿ ಎಂದು ಘೋಷಣೆ ಕೂಗಿದರು. ಹುಬ್ಬಳ್ಳಿಯಿಂದ ಆಗಮಿಸಿದ ವಾಹನವನ್ನು ಬಿಟ್ಟು ಗದಗ ಎಸ್ಪಿ ಅವರ ವಾಹನದಲ್ಲಿ ಗ್ರಾಮಕ್ಕೆ ಆಗಮಿಸಿದ ಅವರು ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡವರನ್ನು ಭೇಟಿ ಆರೋಗ್ಯ ವಿಚಾರಿಸಿದರು.