ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತುಮಕೂರು ಅಥವಾ ನೆಲಮಂಗಲ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಬೇಕು. ಇದರ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ನಾನು ಈಗಾಗಲೇ ಚರ್ಚಿಸಿದ್ದೇನೆ. ನೀವೇನಾದರೂ ಬೇರೆಡೆ ಮಾಡಲು ಪ್ರಯತ್ನಿಸಿದರೆ ನಮಗೆ ಎಚ್‌ಎಎಲ್ ನಿಲ್ದಾಣವೇ ಸಾಕು. ಇದಕ್ಕೆ ನಾನೇ ಟ್ರಂಪ್‌ಕಾರ್ಡ್ ಆಗಿರುತ್ತೇನೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.ಕೊರಟಗೆರೆ ತಾಲೂಕು ಕೋಳಾಲದ ೭ ಗ್ರಾಪಂ ಮತ್ತು ಕಸಬಾ ಹೋಬಳಿಯ ೬ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಸಭೆ ಹಾಗೂ ಕೇಂದ್ರ ಸರ್ಕಾರದ ಯೋಜನೆಯಡಿ ಬರುವ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಣಕಾಸು ಮಂತ್ರಾಲಯ ರಾಜ್ಯ ಸರ್ಕಾರಕ್ಕೆ ೬೩೧೦ ಕೋಟಿ ರು. ಹಣ ಬಿಡುಗಡೆ ಮಾಡಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಅಸ್ತು ಅಂದಿದೆ ಎಂದರು.ನರೇಂದ್ರ ಮೋದಿ ನಮ್ಮ ರಾಜ್ಯದ ರೈಲ್ವೆ ಯೋಜನೆಗೆ ೫೩೦೦ ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ೨೪೦೦ ಕೋಟಿ ರು. ವೆಚ್ಚದ ನೆಲಮಂಗಲ- ತುಮಕೂರಿನ ೪೫ ಕಿಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಫೆಬ್ರವರಿಯಿಂದ ಪ್ರಾರಂಭವಾಗುತ್ತದೆ. ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಕ್ಷೇತ್ರಗಳಿಗೆ ರಾಷ್ಟ್ರೀಯ ಹೆದ್ದಾರಿ ವಿಸ್ತಾರ ಆಗಲಿದೆ ಎಂದು ಮಾಹಿತಿ ನೀಡಿದರು.
ಪ್ಲೋರೈಡ್ ಯುಕ್ತ ನೀರಿನ ಬಗ್ಗೆ ಮಾಹಿತಿ ನೀಡಿ: ತುಮಕೂರು ಜಿಲ್ಲೆಯ ಕೊಳವೆಬಾವಿಗಳ ಪ್ಲೋರೈಡ್ ನೀರಿನ ಬಗ್ಗೆ ೧೫ ದಿನಗಳ ಒಳಗೆ ನನಗೆ ಮಾಹಿತಿ ನೀಡಿ. ಕೇಂದ್ರದಿಂದ ನಾನು ಪ್ರತಿ ಗ್ರಾಮಕ್ಕೆ ೨ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತರುತ್ತೇನೆ. ಕೊಳವೆಬಾವಿಯ ನೀರಿನ ಗುಣಮಟ್ಟದ ಬಗ್ಗೆ ದಯವಿಟ್ಟು ಪರಿಶೀಲನೆ ನಡೆಸಿ. ಬಡಜನರ ಜೀವನದ ಜೊತೆ ಚೆಲ್ಲಾಟವಾಡಬೇಡಿ. ೪೫ ವರ್ಷದ ರಾಜಕೀಯ ಅನುಭವ ಜಿಲ್ಲೆಯ ಅಭಿವೃದ್ಧಿಗೆ ಮಾತ್ರ ಮೀಸಲು. ೨ ವರ್ಷ ನನಗೆ ಅವಕಾಶ ನೀಡಿ, ಜಿಲ್ಲೆಯಲ್ಲಿ ಅಭಿವೃದ್ಧಿಯ ರೂಪುರೇಷೆಯನ್ನೇ ಬದಲಾಯಿಸುತ್ತೇನೆ ಎಂದು ಹೇಳಿದರು.೩೦೦ಕ್ಕೂ ಅಧಿಕ ಜನರಿಗೆ ಸೌಲಭ್ಯ ವಿತರಣೆ: ತುಮಕೂರು ಜಿಲ್ಲಾಡಳಿತ, ಕೊರಟಗೆರೆ ಆಡಳಿತ, ತಾಪಂ, ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ಹತ್ತಾರು ಇಲಾಖೆಗಳಿಂದ ಕೃಷಿ ವಿಕಾಸ, ತುಂತುರು ನೀರಾವರಿ, ರಾಷ್ಟ್ರೀಯ ಜಾನುವಾರು ಮಿಷನ್, ನರೇಗಾ, ಅಲಿಂಕೋ ಸಾಧನಾದ ವಿಶೇಷ ಚೇತನರು ಸೇರಿ ೩೦೦ಕ್ಕೂ ಅಧಿಕ ಫಲಾನುಭವಿಗಳಿಗೆ ಕೇಂದ್ರ ಸಚಿವ ವಿ.ಸೋಮಣ್ಣ ವಿವಿಧ ಸೌಲಭ್ಯಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಬಿ.ಎಚ್. ಅನಿಲ್‌ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ಕೊರಟಗೆರೆ ತಹಸೀಲ್ದಾರ್ ಮಂಜುನಾಥ.ಕೆ., ತಾಪಂ ಇಒ ಅಪೂರ್ವ, ಗ್ರಾಪಂ ಅಧ್ಯಕ್ಷ ನಟರಾಜ್, ಶ್ರೀನಿವಾಸಮೂರ್ತಿ, ಮಾವತ್ತೂರು ಮಂಜುನಾಥ ಸೇರಿದಂತೆ ಇತರರು ಇದ್ದರು.ನರೇಂದ್ರ ಮೋದಿಯ ಪೋಟೋ ಇಲ್ಲದ್ದಕ್ಕೆ ಸೋಮಣ್ಣ ಕಿಡಿ: ಅಧಿಕಾರಿಗಳೇ ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಯೋಜನೆ ಅಲ್ಲವೇ. ನಾನು ಕೇಂದ್ರ ಜಲಶಕ್ತಿ ಮಂತ್ರಿ ಎಂಬುದು ನಿಮಗೆ ತಿಳಿದಿಲ್ಲವೇ? ತುಮಕೂರು ಜಿಲ್ಲೆಗೆ ೨ ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ. ಒಂದೇ ಒಂದು ಗ್ರಾಮದಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯ ಒಂದೇ ಒಂದು ಪೋಟೋ ಕೂಡ ಹಾಕಿಲ್ಲ. ಮುಂದಿನ ಸಲ ನಾನು ಮಾತಿನಲ್ಲಿ ಹೇಳುವುದಿಲ್ಲ, ಪೆನ್, ಪೇಪರ್ ಹಿಡಿಯುತ್ತೇನೆ ನೆನಪಿರಲಿ. ವಿನಂತಿ ಮಾಡುವುದನ್ನು ನನ್ನ ವೀಕ್‌ನೆಸ್ ಅಂದುಕೊಳ್ಳಬೇಡಿ. ಇಷ್ಟೇ ಈತನ ಯೋಗ್ಯತೆ ಅಂದುಕೊಂಡರೆ ನನ್ನ ಬಳಿ ಇನ್ನೂ ಬೇಕಾದಷ್ಟು ಬಾಂಬುಗಳಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಾನು ಕಾರ್ಯಕ್ರಮ- ಸಭೆ ಮಾಡುವುದಿಲ್ಲ: ನಾನು ಸಂಸದ ಎಂಬುದನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಬಾಲಂಗೋಚಿಗಳ ಮಾತಿನಿಂದ ಅಧಿಕಾರಿ ವರ್ಗ ಎಡವಬೇಡಿ. ರೈತರ ಟ್ರಾನ್ಸ್‌ಫಾರ್ಮರ್ ಬದಲಾವಣೆಗೆ ಕೆಲ ಅಧಿಕಾರಿಗಳು ೧ ಲಕ್ಷ ಕೇಳುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ನಾನು ಇನ್ನು ಮುಂದೆ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಭೆ ನಡೆಸುವುದಿಲ್ಲ.ನೀವು ಜನರ ಬಳಿಗೆ ಹೋಗದಿದ್ದರೆ ತಹಸೀಲ್ದಾರ್, ತಾಪಂ ಇಒ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆಗಳೊಂದಿಗೆ ಗ್ರಾಪಂ ಕಚೇರಿಯಲ್ಲಿ ನಾನೇ ಬಂದು ಕುಳಿತುಕೊಳ್ಳುತ್ತೇನೆ ನೆನಪಿರಲಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಭದ್ರಾ ಮೇಲ್ದಂಡೆ ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಭದ್ರಾ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಮತಿ ಕೊಟ್ಟರಾ ನೀವೇ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ವಿಚಾರದಲ್ಲಿ ಯಾವ ರಾಜ್ಯಕ್ಕೂ ತಾರತಮ್ಯ ಮಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಎನ್ನದೇ ರಾಜಕೀಯ ಬದಿಗಿಟ್ಟು ಡಿಸಿಎಂ ಅವರು ನೀರಾವರಿ ಯೋಜನೆಯ ಕಾಮಗಾರಿ ಬಗ್ಗೆ ಗಮನ ಹರಿಸಲಿ.
ವಿ.ಸೋಮಣ್ಣ ಕೇಂದ್ರ ಸಚಿವ