ಕೆಲಸದಲ್ಲಿ ಶ್ರದ್ಧೆ, ಪ್ರೀತಿ ಇರಲಿ: ಬಾಬು ಭಟ್ಕಳ

| Published : Aug 04 2024, 01:17 AM IST

ಸಾರಾಂಶ

ಯಲ್ಲಾಪುರದಲ್ಲಿ ಸತೀಶ ಕಟ್ಟಿಗೆ ಅವರ ೨ನೇ ಪುಣ್ಯಸ್ಮರಣೆಯ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ೨೦೦ ಜನ ಕಣ್ಣನ್ನು ತಪಾಸಣೆ ಮಾಡಿಸಿಕೊಂಡರು. ೧೯೦ ಜನ ರಕ್ತದಾನ ಮಾಡಿದರು.

ಯಲ್ಲಾಪುರ: ನಾವು ಮಾಡುವ ಪ್ರತಿ ಕಾರ್ಯವೂ ಶ್ರದ್ಧೆ, ನಿಷ್ಠೆ, ಪ್ರೀತಿ, ಪರಿಶ್ರಮಗಳಿಂದ ಕೂಡಿರಬೇಕು. ಇಂತಹ ಚಿಂತನೆಯನ್ನು ಸತೀಶ ಕಟ್ಟಿಗೆ ತನ್ನ ಜೀವನದಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರಾಗಿ ಅಳವಡಿಸಿಕೊಂಡು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಜಮಖಂಡಿಯ ರಾ.ಸ್ವ. ಸಂಘದ ಜಿಲ್ಲಾಧ್ಯಕ್ಷ, ಶಿಕ್ಷಕ ಬಾಬು ಭಟ್ಕಳ ಹೇಳಿದರು.

ಇತ್ತೀಚೆಗೆ ಪಟ್ಟಣದ ಅಡಿಕೆ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರ, ಹುಬ್ಬಳ್ಳಿಯ ಡಾ. ಎಂ.ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಯಲ್ಲಾಪುರದ ದೃಷ್ಟಿಕೇಂದ್ರ ಇವುಗಳ ಆಶ್ರಯದಲ್ಲಿ ಸತೀಶ ಕಟ್ಟಿಗೆ ಅವರ ೨ನೇ ಪುಣ್ಯಸ್ಮರಣೆಯ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ವಿಶೇಷ ವಕ್ತಾರರಾಗಿ ಅವರು ಮಾತನಾಡಿದರು. ಸತೀಶ ಕಟ್ಟಿಗೆ ಅವರಿಗೆ ಎಲ್ಲ ಕಾರ್ಯಗಳ ಕುರಿತಾಗಿಯೂ ನೈಪುಣ್ಯತೆಯಿತ್ತು ಎಂದು ಸ್ಮರಿಸಿದರು.

ಹುಬ್ಬಳ್ಳಿಯ ರಾಷ್ಟ್ರೋತ್ಥಾನ ಸಂಸ್ಥೆಯ ರಕ್ತಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು. ಅನೇಕರ ಜೀವ ಉಳಿಸುವಂತಹ ಕಾರ್ಯವಾಗಿದೆ ಎಂದರು.

ಹುಬ್ಬಳ್ಳಿ ಡಾ. ಎಂ.ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ತಜ್ಞ ಡಾ. ಮಯೂರ ಮಾತನಾಡಿ, ದೇಶದಲ್ಲಿ ಒಂದೂವರೆ ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ತೊಂದರೆಗೊಳಗಾದವರಿದ್ದಾರೆ. ಕರಿಗುಡ್ಡೆಯ ದೋಷವಿದ್ದರೆ ಬದಲಿ ಕಣ್ಣನ್ನು ಅಳವಡಿಸಲೇಬೇಕು ಎಂದರು.

ಹಿರಿಯರಾದ ಗಜಾನನ ಭಟ್ಟ ಹರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಸೇವಾ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಶುಭ ಹಾರೈಸಿದರು. ಗಣಪತಿ ಮೆಣಸುಮನೆ ಸ್ವರಚಿತ ಗೀತೆಯನ್ನು ವಾಚಿಸಿದರು. ವೆಂಕಟರಮಣ ಭಟ್ಟ ಕುಂಭತ್ತಿ ಸ್ವಾಗತಿಸಿದರು. ರಾಮಕೃಷ್ಣ ಕವಡೀಕರೆ ನಿರ್ವಹಿಸಿದರು. ಗೋಪಾಲಕೃಷ್ಣ ಗಾಂವ್ಕರ ವಂದಿಸಿದರು. ಶಿಬಿರದಲ್ಲಿ ೨೦೦ ಜನ ಕಣ್ಣನ್ನು ತಪಾಸಣೆ ಮಾಡಿಸಿಕೊಂಡರು. ೧೯೦ ಜನ ರಕ್ತದಾನ ಮಾಡಿದರು.