ಕಾರ್ಯಗಳು ಸಿದ್ಧಿ ಆಗುತ್ತವೆ ಎಂದು ಈ ದೇಶದ ಋಷಿ ಮುನಿಗಳು ಸಂಶೋಧನೆ ಮಾಡಿದ್ದಾರೆ. ಕಾರ್ಯಗಳು ಸಿದ್ಧಿ ಆಗಬೇಕಾದರೆ ಮನುಷ್ಯನ ಶರೀರ ಶುದ್ಧಿ ಮತ್ತು ಗಟ್ಟಿಯಾಗಿರಬೇಕು. ಜೀವನೋತ್ಸಾಹ ಇರಬೇಕು. ಇಂದ್ರೀಯಗಳು ಅವನು ಹೇಳಿದಂಗೆ ಕೇಳುತ್ತಿರಬೇಕು ಮತ್ತು ಪ್ರಯತ್ನಶೀಲರಾಗಿರಬೇಕು. ಇವು ಎಲ್ಲದರ ಮೇಲೆ ತಾಯಿ ಅಂಬಾದೇವಿಯ ಆಶೀರ್ವಾದ ಮತ್ತು ದೈವಬಲ ಇರಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕಾರ್ಯಗಳು ಸಿದ್ಧಿ ಆಗುತ್ತವೆ ಎಂದು ಈ ದೇಶದ ಋಷಿ ಮುನಿಗಳು ಸಂಶೋಧನೆ ಮಾಡಿದ್ದಾರೆ. ಕಾರ್ಯಗಳು ಸಿದ್ಧಿ ಆಗಬೇಕಾದರೆ ಮನುಷ್ಯನ ಶರೀರ ಶುದ್ಧಿ ಮತ್ತು ಗಟ್ಟಿಯಾಗಿರಬೇಕು. ಜೀವನೋತ್ಸಾಹ ಇರಬೇಕು. ಇಂದ್ರೀಯಗಳು ಅವನು ಹೇಳಿದಂಗೆ ಕೇಳುತ್ತಿರಬೇಕು ಮತ್ತು ಪ್ರಯತ್ನಶೀಲರಾಗಿರಬೇಕು. ಇವು ಎಲ್ಲದರ ಮೇಲೆ ತಾಯಿ ಅಂಬಾದೇವಿಯ ಆಶೀರ್ವಾದ ಮತ್ತು ದೈವಬಲ ಇರಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಸುಕ್ಷೇತ್ರ ಅಂಬಾಮಠದಲ್ಲಿ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ ಹಾಗೂ ಅಂಬಾದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂಬಾದೇವಿ ದೇವಸ್ಥಾನದ ನೂತನ ಶಿಲಾ ಮಂಟಪ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನ ಶರೀರ ಚೆನ್ನಾಗಿರಬೇಕು. ಜೀವನದಲ್ಲಿ ಉತ್ಸಾಹ ಇರಬೇಕು. ಕಣ್ಣು, ಮೂಗು, ಬಾಯಿ, ಕಿವಿಯಂತಹ ಇಂದ್ರೀಯಗಳ ಬೆಲೆ ಗೊತ್ತಿರಬೇಕು. ಅವುಗಳನ್ನು ಚೆನ್ನಾಗಿ ಉಪಯೋಗ ಮಾಡಬೇಕು. ಈ ಮೂಲಕ ಸಮಾಜದಲ್ಲಿ ದೊಡ್ಡವರಾಗಬೇಕು, ಬದುಕು ಕಟ್ಟಿಕೊಳ್ಳುವ ಚಿಂತನೆ ಇರಬೇಕು ಎಂದರು.
ಪ್ರತಿಯೊಬ್ಬ ಮನುಷ್ಯನಿಗೂ ಕೆಟ್ಟ ಮಾತುಗಳು ಬರುತ್ತವೆ, ನಿಂದನೆಗಳು ಬರುತ್ತವೆ. ಅವುಗಳಿಗೆ ಕಿವಿಗೊಟ್ಟು ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಬಿಡಬಾರದು. ಉತ್ಸಾಹ ಕಳೆದುಕೊಳ್ಳಬಾರದು. ಜೋಳವನ್ನು ಚೀಲದಲ್ಲಿ ತುಂಬುವಾಗ ನಾಲ್ಕು ಹಳ್ಳುಗಳು ಬರುತ್ತವೆ. ಅವುಗಳನ್ನು ಸೇರಿಸಿ ತುಂಬಿರುತ್ತೀವಿ. ಅದಕ್ಕೆ ಜೋಳದ ಚೀಲ ಅಂತೀವಿ ಹೊರತು ಹಳ್ಳುಗಳ ಚೀಲ ಅನ್ನುವುದಿಲ್ಲ. ಊರು ಅಂದಾಗ ಅದೇ ರೀತಿ ನಾಲ್ಕು ಇರುತ್ತವೆ ಅಂತ ತಿಳಿದುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.ಚಿಕೇನಕೊಪ್ಪದ ಶಾಂತವೀರ ಶರಣರು ಸೇರಿದಂತೆ ವಿವಿಧ ಮಠಾಧೀಶರುಗಳು ಮಾತನಾಡಿದರು. ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡರ್, ಶಿವನಗೌಡ ಎಲೆಕೂಡ್ಲಿಗಿ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡರಾದ ರಾಜುಗೌಡ ಬಾದರ್ಲಿ, ಲಿಂಗರಾಜ ಪಾಟೀಲ್ ಹಂಚಿನಾಳ, ಆರ್.ಸಿ.ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.