ಸಾರಾಂಶ
ಮುಂಡರಗಿ: ಶ್ರೇಷ್ಠ ಶಿಕ್ಷಕರಲ್ಲಿ ಇರಬೇಕಾದ ಬಹುದೊಡ್ಡ ಗುಣವೆಂದರೆ ವಿನಯಶೀಲತೆ. ಅದು ಪ್ರತಿಯೊಬ್ಬ ಶಿಕ್ಷಕರಲ್ಲಿ ಇರಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಆರ್.ಎಲ್.ಪೊಲೀಸ್ ಪಾಟೀಲ ಹೇಳಿದರು.
ಅವರು ಇತ್ತೀಚೆಗೆ ಹಿರೇವಡ್ಡಟ್ಟಿ ಸರ್ಕಾರಿ ಎಸ್.ವಿ.ಎಸ್.ಕೆ. ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪ್ರೊ. ಎಂ.ಆರ್.ಕುಲಕರ್ಣಿಯವರಿಗೆ ಓಣಿಯ ಜನರ ಪರವಾಗಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಕರ ಮೇಲೆ ಬಹುದೊಡ್ಡ ಹೊಣೆಗಾರಿಕೆ ಇರುತ್ತದೆ. ಅದನ್ನು ಎಂ.ಆರ್. ಕುಲಕರ್ಣಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶಿಕ್ಷಕ ವೃತ್ತಿಗಿರುವ ಗೌರವ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ. ಶಿಕ್ಷಕರಾದವರು ಮೊದಲು ತಮ್ಮ ವೃತ್ತಿ , ಕಲಿಸುವ ವಿಷಯ, ಕಲಿಯುವ ವಿದ್ಯಾರ್ಥಿಗಳನ್ನು ಪ್ರೀತಿ ಮಾಡಬೇಕು ಎಂದರು.
ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ, ಪ್ರೊ. ಎಂ.ಆರ್.ಕುಲಕರ್ಣಿ ಅವರು ಸ್ಥಳೀಯ ಕ.ರಾ. ಬೆಲ್ಲದ ಕಾಲೇಜಿನಿಂದ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿ ನಂತರ ದೂರದ ಕಲಬುರಗಿ ಜಿಲ್ಲೆಯಲ್ಲಿ ಅಲ್ಲಿಂದ ವಿಜಯನಗರ ಜಿಲ್ಲೆಯಲ್ಲಿ ಅಲ್ಲಿಂದ ಮುಂಡರಗಿ ತಾಲೂಕಿನ ಡೋಣಿ, ಹಿರೇವಡ್ಡಟ್ಟಿಯಲ್ಲಿ ತಮ್ಮ ಸೇವೆ ಸಲ್ಲಿಸಿದರು. ನಿರಂತರವಾಗಿ ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಮತ್ತೊಬ್ಬರೊಂದಿಗೆ ನಗುಮುಖದೊಂದಿಗೆ ಮಾತನಾಡಿ ಮುಂದೆ ಸಾಗುವ ಜಾಯಮಾನ ಅವರದಾಗಿದೆ. ತಮ್ಮ ಉಪನ್ಯಾಸಕ, ಪ್ರಾಚಾರ್ಯ ವೃತ್ತಿಯ ಜತೆಗೆ ಸಾಹಿತ್ಯಾಭಿರುಚಿ ಬೆಳೆಸಿಕೊಂಡು ಎಲ್ಲರೊಂದಿಗೆ ಪರಸ್ಪರ ಆತ್ಮೀಯತೆಯಿಂದ ಇರುವಂತವರಾಗಿದ್ದಾರೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಪುರಸಭ ಸದಸ್ಯ ನಾಗೇಶ ಹುಬ್ಬಳ್ಳಿ, ಶಿಕ್ಷಕರಾದ ಎನ್.ಎಸ್.ಶೀರನಹಳ್ಳಿ, ಎಂ.ಎಸ್.ಶೀರನಹಳ್ಳಿ ಮಾತನಾಡಿ, ಎಂ.ಆರ್.ಕುಲಕರ್ಣಿ ಸದಾಸುಖಿ ಹಸಣ್ಮುಖಿ ಎನ್ನುವಂತೆ ಸ್ನೇಹಜೀವಿಯಾಗಿ, ಒಬ್ಬ ಸರಳ ಸಜ್ಜನಿಕೆಯ ಸಹಕಾರ ಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಎಂ.ಆರ್. ಕುಲಕರ್ಣಿ ಮಾತನಾಡಿ, ಓಣಿಯ ಬಳಗವೆಲ್ಲ ಒಂದು ಕುಟುಂಬದಂತಿದ್ದೇವೆ. ಇಂದು ನನ್ನ ಕುಟುಂಬದವರೆಲ್ಲರೂ ಸೇರಿ ಸನ್ಮಾನಿಸಿರುವುದು ಸಂತಸ ತಂದಿದೆ. ತಮ್ಮೆಲ್ಲರ ಪ್ರೀತಿ ಸದಾ ಇರಲಿ ಎಂದರು.ಜೀವವಿಮಾ ಪ್ರತಿನಿಧಿ ಬಿ.ಆರ್. ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂ.ಆರ್.ಕುಲಕರ್ಣಿ ದಂಪತಿಗಳಿಗೆ ಓಣಿ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾ.ವಿಶ್ವನಾಥಗೌಡ ಪಾಟೀಲ, ಸುವರ್ಣಾ ಪತ್ತಾರ, ಸೌಮ್ಯಾ ಕುಲಕರ್ಣಿ, ಲಿಂಗರಾಜ ದಾವಣಗೇರಿ, ರವೀಂದ್ರ ಕಮ್ಮಾರ, ಅಂದಪ್ಪ ಶಿವಶೆಟ್ಟರ, ಶರಣು ಸೊಲಗಿ ಸೇರಿದಂತೆ ಓಣಿಯ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ರಾಜಶೇಖರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.