ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜನರಿಗಾಗಲಿ, ಜಾನುವಾರುಗಳಿಗಾಗಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಎಲ್ಲಾ ಹಳ್ಳಿಗಳಲ್ಲಿ ಅವಶ್ಯಕತೆ ಇದ್ದಲ್ಲಿ ಕೊಳವೆಬಾವಿ ಕೊರೆಸಿ ನೀರು ಒದಗಿಸುವುದರ ಜೊತೆಗೆ ಜಾನುವಾರುಗಳಿಗೆ ತೊಟ್ಟಿ ನಿರ್ಮಾಣ ಮಾಡಿ ನೀರು ನೀಡುವಂತೆ ಶಾಸಕ ಎಚ್. ಡಿ. ರೇವಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನ ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆ, ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಹೋಬಳಿಯ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಆ ಗ್ರಾಮಕ್ಕೆ ಹೆಚ್ಚುವರಿ ಕೊಳವೆಬಾವಿ ಕೊರೆಸಬೇಕು, ಇದರೊಂದಿಗೆ ಖಾಸಗಿ ಕೊಳೆಬಾವಿಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಇದರೊಂದಿಗೆ ಪ್ರತಿ ಗ್ರಾಮಕ್ಕೆ ನಾಲ್ಕರಂತೆ ಜಾನುವಾರುಗಳು ನೀರು ಕುಡಿಯುವ ಸಲುವಾಗಿ ಜಾನುವಾರು ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು. ಇದಕ್ಕಾಗಿ ೧ ಕೋಟಿ ರು.ಗಳ ಅವ್ಯಕತೆಯಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ವಿಭಾಗದ ಎಂಜಿನಿಯರಿಗಳಿಗೆ ಸೂಚಿಸಿದರು.ಇದೇ ವೇಳೆ ಆನೇಕೆರೆ ಪಂಚಾಯಿತಿ ಪಿಡಿಓ ಜಲಜೀವನ್ ಮೀಷನ್‌ನವರು ಸಮರ್ಪಕವಾಗಿ ನೀರು ಹರಿಸುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದಾಗ, ಜೆಜೆಎಂಎಲ್ ಅಧಿಕಾರಿ ನೀರಿನ ಕೊರತೆ ಇದ್ದು, ನಮ್ಮ ಓವರ್‌ಹೆಡ್ ಟ್ಯಾಂಕಗಳಿಗೆ ಗ್ರಾಮದಲ್ಲಿರುವ ಕೊಳವೆ ಬಾವಿಗಳನ್ನು ಸಂರ್ಪಕಿಸುವ ಕೆಲಸ ಮಾಡಿದರೆ ನೀರಿನ ಕೊರತೆ ನೀಗಲಿದೆ ಎಂದರು. ಆಗ ಶಾಸಕರು ಬೋರ್‌ವೆಲ್‌ಗಳನ್ನು ಓವರ್‌ಹೆಡ್ ಟ್ಯಾಂಕಿಗೆ ಸಂಪರ್ಕ ಕಲ್ಪಿಸಲು ಅನುಮತಿಗಾಗಿ ಇಲಾಖೆಗೆ ಪತ್ರ ಬರೆಯುವುಂತೆ ಸೂಚಿಸಿದರು. ಇನ್ನು ಉದಯಪುರ ಆಸ್ಪತ್ರೆ ಮತ್ತು ಸ್ಕೂಲ್‌ಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಬೇಕೆಂದರು. ಹೋಬಳಿ ವ್ಯಾಪ್ತಿಯ ೪೫ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಇ-ಸ್ವತ್ತಾಗದೆ ಹಾಗೆ ಉಳಿದಿರುವುದರ ಬಗ್ಗೆ ರೇವಣ್ಣನವರ ಗಮನಕ್ಕೆ ಇಒ ತಂದಾಗ ಸ್ವತಂತ್ರ ಪೂರ್ವದ ಶಾಲೆಗಳಿಗಿನ್ನೂ ಈ ಸ್ವತ್ತು ನೀಡದ ಸರ್ಕಾರದ ಕ್ರಮವನ್ನು ಖಂಡಿಸಿದರು.ಈ ಸಂದರ್ಭ ತಹಸೀಲ್ದಾರ್‌ ಜಿ.ಎಸ್.ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್‌ಗೌಡ ಇದ್ದರು.