ನಮ್ಮ ಸಂವಿಧಾನವು ಸಹ ಮಾನವ ಹಕ್ಕುಗಳ ಗೌರವಿಸುವ ಮತ್ತು ರಕ್ಷಣೆ ಒದಗಿಸುತ್ತದೆ. ಸ್ವಾಭಾವಿಕವಗಾಗಿ ಪ್ರತಿಯೊಬ್ಬರು ವಿಶೇಷತೆ ಹೊಂದಿದ್ದು, ತಮ್ಮದೇಯಾದ ಸಾಮರ್ಥ್ಯ ಹೊಂದಿರುತ್ತಾರೆ. ಮಾನವ ಹಕ್ಕುಗಳನ್ನು ಗೌರವಿಸುವ ರಕ್ಷಿಸುವುದು ಆಶಯ ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ವರು ಮಾನವ ಹಕ್ಕುಗಳ ರಕ್ಷಣೆ ಹಾಗೂ ಪಾಲನೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಪರಿಪಾಲಿಸುವುದು ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹರೀಶ್.ಎ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಅರಿವು ಅವುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಉಲ್ಲಂಘನೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ. ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾನವ ಹಕ್ಕುಗಳ ಸಂರಕ್ಷಣೆಯ ಅರಿವು ಮತ್ತು ಜಾಗೃತಿ ಹೊಂದಬೇಕು. ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪವಾದದ್ದು, ಅದು ನಾಗರಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಹಕ್ಕು ಒಳಗೊಂಡಿದ್ದು, ಸಮಾನತೆ, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವುದು, ಕಲಿಕೆ, ಆಯ್ಕೆಯ ವೃತ್ತಿ, ಆತ್ಮಸಾಕ್ಷಿ ಸೇರಿದಂತೆ ಇವುಗಳ ತಾರತಮ್ಯವಾಗದಂತೆ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸೋಣ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಘನತೆ ಗೌರವ ಹೊಂದಿದ್ದು, ಆ ಘನತೆ ಗೌರವಕ್ಕೆ ಕುಂದು ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಮಾನವ ಹಕ್ಕುಗಳ ರಕ್ಷಣೆಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ, ಮಾನವ ಹಕ್ಕುಗಳ ರಕ್ಷಣೆ 1993ರನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ರಚನೆಯ ಸಂವಿಧಾನ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ರಾಜ್ಯ ನೀತಿ ನಿರ್ದೇಶಕ ತತ್ವಗಳು ಉಲ್ಲೇಖವಾಗಿವೆ. ಮಾನವ ಹಕ್ಕುಗಳ ಬಗ್ಗೆ ನಾವು ಅರಿತುಕೊಂಡು ಪ್ರತಿಯೊಬ್ಬರನ್ನು ಪ್ರೀತಿಯಿಂದ, ಗೌರವದಿಂದ, ಭ್ರಾತೃತ್ವ ಮನೋಭಾವನೆಯನ್ನು ಹೊಂದುವ ಮೂಲಕ ಮಾನವ ಹಕ್ಕುಗಳ ಘನತೆಯನ್ನು ಎತ್ತಿಹಿಡಿದು ನಮ್ಮ ಜವಾಬ್ದಾರಿ ಮೆರೆಯೋಣ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ್ ಪೊತದಾರ, ತಹಸೀಲ್ದಾರ್‌ ಪಿ.ಎಸ್.ಚನಗೊಂಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾನೂನು ಅಭಿರಕ್ಷಕ ಆರ್.ಎಸ್.ಬಿದರಿ, ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.