ಕಾರವಾರ: ಪ್ರಕೃತಿಯು ಮನುಷ್ಯನಿಗೆ ಬದುಕಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು, ಪ್ರಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದ್ದು, ಪರಿಸರ ಅಭಿವೃದ್ಧಿಯೊಂದಿಗೆ ಸುಸ್ಥಿರ ಅಭಿವೃದ್ಧಿಯಾಗಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಹೇಳಿದರು.
ಇಲ್ಲಿಯ ಹಿಂದೂ ಪ್ರೌಢಶಾಲಾ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಈ ವರ್ಷದ ಘೋಷವಾಕ್ಯ “ಹವಾಮಾನ ಕ್ರಮ” ಆಗಿದ್ದು, ಹವಾಮಾನ ಬದಲಾವಣೆ ಇಂದು ವಿಶ್ವದ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದರು.ವಿಶೇಷ ಉಪನ್ಯಾಸ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕಿ ಡಾ. ಅಮೃತಾ ಶೇಟ್, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೋಹಿದಾಸ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಟಿ.ಎಂ. ಶಮೀಂದ್ರ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ ಭುಜಲೆ ಇದ್ದರು.ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕವಿತಾ ಮೇಸ್ತ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕಾ ದೇಶಭಂಡಾರಿ ವಂದಿಸಿದರು.
ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಕಾಂಚಿಕಾ ಆರ್. ನಾಯ್ಕ, ಸಾನಿಯಾ ಮೋಹನ ಖಾರ್ವಿ, ಎನ್.ವಿ. ಇಂಪನಾ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಅಮೂಲ್ಯಾ ಖಾರ್ವಿ, ಹುರೇನ್ ಶೇಖ್, ಶ್ರೇಯಾ ಎಂ. ಶೇಟ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.
ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಶ್ರಮಿಸುತ್ತಿರುವ ಕಾರವಾರ ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಎಂ. ಶೆಟ್ಟಿ ಮತ್ತು ಪೌರ ಕಾರ್ಮಿಕರಾದ ಪೆದ್ದಣ್ಣ ಪೆದ್ದ ಕೊಂಡಯ್ಯ, ನಿರ್ಮಲಾ ಮಹಾಬಳೇಶ್ವರ ಕುಮಟಾಕರ ಅವರನ್ನು ಅಭಿನಂದಿಸಲಾಯಿತು. ಆರಂಭದಲ್ಲಿ ಗಿಡಗಳನ್ನು ನೆಡಲಾಯಿತು.