ಉಳ್ಳವರು ಇಲ್ಲದವರಿಗೆ ದಾನ ಮಾಡುವ ಪರೋಪಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಸಾಗರ: ಉಳ್ಳವರು ಇಲ್ಲದವರಿಗೆ ದಾನ ಮಾಡುವ ಪರೋಪಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜೈನಮಂದಿರದ ಆವರಣದಲ್ಲಿ ಸರ್ವತೋಭದ್ರ ಜೈನ ಸಮಾಜದಿಂದ ಮಂಗಲ ಪುರ ಪ್ರವೇಶ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ದಾನ ಮತ್ತು ಪೂಜೆ ಶ್ರಾವಕರ ಮುಖ್ಯ ಕರ್ತವ್ಯ ಎಂದರು.ನಮ್ಮಲ್ಲಿ ಸಾಕಷ್ಟು ಜನರಿಗೆ ನಮ್ಮ ಅಜ್ಜಮುತ್ತಜ್ಜನ ಹೆಸರು ಗೊತ್ತಿರುವುದಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದೆ ಬಾಳಿ ಬದುಕಿದ ರಾಮ, ಕೃಷ್ಣರ ಹೆಸರು ನೆನಪಿನಲ್ಲಿ ಇರುತ್ತದೆ. ನಾವು ಯಾವುದೇ ಸಾಧನೆ ಮಾಡದೆ ಹೋದರೆ ಸಮಾಜ ನಮ್ಮನ್ನು ನೆನಪಿಸಿಕೊಳ್ಳುವುದಿಲ್ಲ ಎಂದರು.ಸಾಗರ ಧರ್ಮಸಹಿಷ್ಣತೆಗೆ ಹೆಸರುವಾಸಿಯಾದ ಊರಾಗಿದೆ. ಇಲ್ಲಿ ನಾವು ೨೪ ವರ್ಷಗಳ ಕಾಲ ಜೀವಿಸಿದ್ದೇವೆ. ಇಲ್ಲಿ ನಮಗೆ ಅನೇಕ ನೆನಪುಗಳಿವೆ. ಎಲ್ಲರ ಸಹಕಾರದಿಂದ ನಾವು ಶ್ರವಣಬೆಳಗೊಳದಂತಹ ಪೀಠಕ್ಕೆ ಹೋಗಲು ಸಾಧ್ಯವಾಗಿದೆ. ಇದನ್ನು ನಾವು ಸದಾ ಸ್ಮರಿಸಿಕೊಳ್ಳುತ್ತೇವೆ. ಸಾಗರ ಜೈನಬಸದಿ ಅಭಿವೃದ್ಧಿಗೆ ಶ್ರವಣಬೆಳಗೊಳ ಸಹ ಸಹಕಾರ ನೀಡುತ್ತದೆ. ಮಂಗಲ ಪುರಪ್ರವೇಶ ಅತ್ಯಂತ ಶಿಸ್ತುಬದ್ಧವಾಗಿ ನಡೆಸಿದ್ದೀರಿ. ನಮ್ಮ ಜನ್ಮಭೂಮಿಯಲ್ಲಿ ಸಿಕ್ಕಿರುವ ಈ ಸ್ವಾಗತ ನಮಗೆ ಸದಾ ನೆನಪಿನಲ್ಲಿ ಇರುತ್ತದೆ ಎಂದು ಹೇಳಿದರು.ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಚ್ಚಾಚಾರ್ಯ ಸ್ವಾಮೀಜಿ ಮಾತನಾಡಿ, ಅಭಿನವ ಚಾರುಕೀರ್ತಿ ಸ್ವಾಮಿಗಳ ನೇತೃತ್ವದಲ್ಲಿ ಶ್ರವಣಬೆಳಗೊಳದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರುತ್ತದೆ. ಅತ್ಯಂತ ಕ್ರಿಯಾಶೀಲವಾಗಿ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ಸಾಗರ ಅತ್ಯಂತ ಸಂಭ್ರಮದಿಂದ ಶ್ರೀಗಳ ಮಂಗಲ ಪುರಪ್ರವೇಶದಲ್ಲಿ ಭಾಗಿಯಾಗಿದೆ. ಪ್ರತಿಯೊಂದು ಮನೆಯಲ್ಲೂ ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿತ್ವ ಬೆಳೆಸುವ ಕೆಲಸವಾಗಬೇಕು ಎಂದು ಆಶಿಸಿದರು.ಸೋಂದಾಮಠದ ಶ್ರೀ ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಧರ್ಮದ ರಕ್ಷಣೆ, ಆತ್ಮೋನ್ನತ, ಸಮಾಜ ಕಲ್ಯಾಣದ ಬಗ್ಗೆ ಯೋಚಿಸುವ ಗುಣ ಉಳ್ಳವರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎನ್ನುವುದಕ್ಕೆ ಶ್ರವಣಬೆಳಗೊಳ ಶ್ರೀಗಳೆ ಸಾಕ್ಷಿಯಾಗಿದ್ದಾರೆ. ಹಿರಿಯ ಶ್ರೀಗಳ ಪೂರ್ಣಾಶೀರ್ವಾದ ಪಡೆದ ಅಭಿನವ ಚಾರುಕೀರ್ತಿ ಶ್ರೀಗಳ ನೇತೃತ್ವದಲ್ಲಿ ಶ್ರವಣಬೆಳಗೊಳ ಜೈನಪೀಠವು ಇನ್ನಷ್ಟು ಅಭಿವೃದ್ಧಿ ಹೊಂದುವ ಜೊತೆಗೆ ಜೈನಧರ್ಮ ವಿಶ್ವದಾದ್ಯಂತ ಪ್ರಸರಿಸಲಿದೆ ಎಂದು ಆಶಿಸಿದರು.ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿದರು. ಸಮಾಜದ ಅಧ್ಯಕ್ಷ ಗಜೇಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಎಚ್.ಎಂ.ವೀರರಾಜ ಜೈನ್, ವೀರೇಂದ್ರಕುಮಾರ್.ಪಿ, ಚಂದ್ರಕಲಾ ಜೈನ್, ಛಗನ್ ಲಾಲ್ ಹಾಜರಿದ್ದರು.

ಜ್ಯೋತಿ ನೇಮಿರಾಜ್ ಸ್ವಾಗತಿಸಿದರು. ಡಾ.ಮಹಾವೀರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪಿ.ಸಂಪತ್ ಕುಮಾರ್ ಗುರುವಂದನೆ ನುಡಿ ನುಡಿದರು. ವಿ.ಟಿ.ಸ್ವಾಮಿ ವಂದಿಸಿದರು. ಕುಮುದಾ ನಿರೂಪಿಸಿದರು.

ಬೆಳಿಗ್ಗೆ ಶ್ರೀಗಳ ಪುರಪ್ರವೇಶ ಅಂಗವಾಗಿ ತ್ಯಾಗರ್ತಿ ವೃತ್ತದಿಂದ ಬೈಕ್ ಮತ್ತು ಕಾರು ರ್‍ಯಾಲಿ, ನಂತರ ಶ್ವೇತಾಂಬರ ಬಸದಿಯಿಂದ ಜೈನ ಬಸದಿವರೆಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು.