ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಂಗಳದಲ್ಲಿನ ವಿಶಾಲ ಪ್ರಾಂಗಣದಲ್ಲಿ ಶನಿವಾರ ಶುರುವಾಗಿರುವ ‘ರೈತರ ನಡೆ, ಸಾವಯವ ಕೃಷಿ ಕಡೆ’ ಎನ್ನುವ ಘೋಷವಾಕ್ಯದ 3 ದಿನಗಳ ಕೃಷಿ ಜಾತ್ರೆಗೆ ಚಾಲನೆ ದೊರಕಿದೆ.ಶನಿವಾರ ಬೆ.10 ಗಂಟೆಗೆ ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಿ ರಸಾಯನಿಕ ಕೃಷಿ ಬಿಟ್ಟುಬಿಡಿ, ಸಾವಯವ ಕೃಷಿಯ ಕೈ ಹಿಡಿಯಿರಿ ಎಂದು ಸೇರಿದ್ದ ಸಹಸ್ರಾರು ರೈತರನ್ನುದ್ದೇಶಿಸಿ ಹಿತವಚನ ನೀಡಿದರು.
ಸಾವಯವ ಕೃಷಿಯೇ ಬದುಕಿನ ಮೂಲ, ಹೆಚ್ಚಿನ ಇಳುವರಿ ಆಶೆ ಬಿದ್ದು ರಸಾಯನಕ್ಕೆ ಜೋತು ಬೀಳದೆ ಸಾವಯವ ಕೃಷಿಗೆ ತರೆದುಕೊಂಡು ಭೂಮಿಯ ಆರೋಗ್ಯ, ನಿಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳಿರೆಂದು ರೈತರಿಗೆ ಕರೆ ನೀಡಿದರು.ಕನ್ಹೇರಿ ಮಠದಲ್ಲಿನ ಕೃಷಿ ಜಾಗೃತಿ ಕುರಿತಂತೆ ರೈತರೆಲ್ಲರಿಗೂ ತಿಳಿದಿದೆ, ಎಲ್ಲರೂ ಅಲ್ಲಿ ಬಂದು ಕೃಷಿಯಲ್ಲಿನ ಹೊಸತನ, ಸಾವಯವ ಕೃಷಿ ಕಡೆಗೆ ಹೊರಟ ಬಗೆಯನ್ನು ಅರಿಯಿರಿ ಎಂದರಲ್ಲದೆ ಕೃಷಿ ಜಾತ್ರೆಯಂದ ಕಲಬುರಗಿ ರೈತರು ಹಚ್ಚು ಸಂಖ್ಯೆಯಲ್ಲಿ ರಸಾಯನದಿಂದ ದೂರವಾಗಲಿ, ಸಾವಯವದ ಕೈ ಹಿಡಿಯುವಂತಾಗಲಿ ಎಂದು ಹಾರೈಸಿದರು.
ಕೆಕೆಆರ್‌ಡಿಬಿಯಿಂದ ಕೃಷಿ ಅವಿಷ್ಕಾರ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮತನಾಡಿದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಕೃಷಿ ರಂಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಸೇರಿದಂತೆ ಕೃಷಿಯಲ್ಲಿ ಹೊಸತನ ಸುಧಾರಣೆ ತರಲು ಉದ್ದೇಶಿಸಲಾಗಿದೆ, ಇದಕ್ಕಾಗಿ ಕೃಷಿ ಅವಿಷ್ಕಾರ ಎಂಬ ಹೆಸರಲ್ಲಿ ಪ್ರತ್ಯೇಕ ಯೋಜನೆವನ್ನೇ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಿದರು.ಕಲ್ಯಾಣ ನಾಡಿನ ರೈತ ಸಮೂಹಕ್ಕೆ ಹೇಗೆಲ್ಲಾ ಸಹಾಯಕ್ಕೆ ನಿಲ್ಲಬಹುದು ಎಂಬುದರ ಬಗ್ಗೆ ಚಿಂತನೆ ಸಾಗಿದೆ. ಬರುವ ದಿನಗಳಲ್ಲಿ ಕೃಷಿ ಅವಿಷ್ಕಾರದ ಹೆಸರಲ್ಲಿ ರೈತರ ನೆರವಿಗೆ ನಿ್ಲೋದು ನಿಶ್ತಿತ ಎಂದು ಡಾ. ಅಜಯ್ ಸಿಂಗ್ ಭರವಸೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಶಿವಯೋಗಿಗಳು, ಬೆಳಗುಂಪಾದ ಅಭಿನವ ಪರುತೇಶ್ವರ ಶಿವಾಚಾರ್ಯರು, ಸೇಡಂ ಸದಾಶಿವ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಸಿಎಂ ಸಲಹೆಗಾರ ಬಿಆರ್ ಪಾಟೀಲ್, ಶಾಸಕ ಅಲ್ಲಂಪ್ರಭು ಪಾಟೀಲ್, ಶಶಿಲ್ ನಮೋಶಿ, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಮಂಜುನಾಥ ಜೇವರ್ಗಿ ಇದ್ದರು.ಜಾತ್ರೆಗೆ ಬಾರದ ಸಚಿವರು: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವ ಶರಣಬಸಪ್ಪ ದರ್ಶನಾಪೂರ, ಸಚಿವ ಈಶ್ವರ ಖಂಡ್ರೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದರು ಕೃಷಿ ಜಾತ್ರೆಯತ್ತ ಸುಳಿಯಲಿಲ್ಲ.
ಕೃಷಿ ಜಾತ್ರೆಯಲ್ಲಿ ಗೋಷ್ಠಿಗಳು: ಶನಿವಾರದ ಗೋಷ್ಠಿಗಳಲ್ಲಿ ಜೇನು ಸಾಕಣಿಕೆ ಕುರಿತು ಶಿರಸಿಯ ಮಧುಕೇಶ್ವರ ಹೆಗಡೆ, ಸಮಗ್ರ ಕೃಷಿ ಪದ್ಧತಿಯ ಕುರಿತು ಕಾಶಿಲಿಂಗಯ್ಯ ವೀರಯ್ಯ, ಹೊಲದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆ ಕುರಿತು ದೀಪಕ್ ಸೋಮಯಾಜಿಯವರ ವಿಶೇಷ ಉಪನ್ಯಾಸ ರೈತರಿಗೆ ಉಪಯುಕ್ತವಾಗಿತ್ತು.---------
ಕೃಷಿ ಜಾತ್ರೆಯಲ್ಲಿ ಭಾನುವಾರ ಇವೆಲ್ಲ ಇರಲಿವೆಜಾತ್ರೆಯ 2 ನೇ ದಿನವಾದ ಭಾನುವಾರ ರ ಬೆಳಗ್ಗೆ 10 ಗಂಟೆಗೆ ಔಷಧಿ ಮತ್ತು ಸುಂಗಂಧ ಸಸ್ಯಗಳ ಕುರಿತು ಚರ್ಚೆಗೋಷ್ಠಿಯ ಸಾನ್ನಿಧ್ಯವನ್ನು ನಂದಿವೇರಿ ಮಠ, ಕಪ್ಪತಗುಡ್ಡ, ಡೋಣಿ ಗದಗದ ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಚಿನಮಗೇರಿಯ ಸಿದ್ಧರಾಮ ಶಿವಾಚಾರ್ಯರು ಉಪಸ್ಥಿತರಿರುವರು. ಮಧ್ಯಾಹ್ನ 12ರಿಂದ 3ರ ವರೆಗೆ ಸಾವಯವ ಕೃಷಿಯಲ್ಲಿ ಯಂತ್ರಗಳ ಮಹತ್ವದ ಕುರಿತು ಡಾ. ಸಿ. ನಾಗರಾಜ್, ಸಾವಯವ ಕೃಷಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಬಾಲಚಂದ್ರ ಜಾಬಶೆಟ್ಟಿ, ಬಾಳೇ ಕಾಂಡದಿಂದ ಬಟ್ಟೆ ತಯಾರಿಕೆ ಕುರಿತು ದೇವರಾಜ ನಾಯಕ ಹಾಗೂ ಕೋಳಿ ಸಾಕಾಣಿಕೆ ಕುರಿತು ನಿತಿನ್ ರಂಗದಾಳ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಮಾಡಿದ ರೈತರಿಗೆ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.