ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ಆಗಲಿ: ತಂಝೀಂ

| Published : Dec 14 2024, 12:48 AM IST

ಸಾರಾಂಶ

ಮುರುಡೇಶ್ವರ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ ಆಗಬೇಕಿದೆ.

ಭಟ್ಕಳ: ಮುರುಡೇಶ್ವರ ಸಮುದ್ರ ತೀರದಲ್ಲಿ ಪ್ರವಾಸಿಗರ ಸುರಕ್ಷತೆಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸಿಗರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮಜ್ಲಿಸೆ ಇಸ್ಲಾಹ ವ ತಂಝೀಂ ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ನೀಡಿದ ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಮುರುಡೇಶ್ವರ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖರ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ ಆಗಬೇಕಿದೆ. ವರ್ಷಂಪ್ರತಿ ಮುರುಡೇಶ್ವರ ಸಮುದ್ರದಲ್ಲಿ ದುರಂತ ನಡೆಯುತ್ತಲೇ ಇದೆ. ಇನ್ನಾದರೂ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು.

ಮುರುಡೇಶ್ವರದ ದುರ್ಘಟನೆಯಿಂದ ರಾಜ್ಯದ ಪ್ರವಾಸಿಗರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತಿದ್ದು, ವಿಶೇಷವಾಗಿ ಶಾಲಾ ಶೈಕ್ಷಣಿಕ ಪ್ರವಾಸಗಳ ಸುರಕ್ಷತೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎತ್ತಿ ತೋರಿಸುತ್ತಿದೆ. ಮುರುಢೇಶ್ವರ ಪ್ರವಾಸಿ ತಾಣದಲ್ಲಿ ಅಲೆಗಳಿಗೆ ಸಿಲುಕಿ ನಾಲ್ವರು ಮುಗ್ಧ ವಿದ್ಯಾರ್ಥಿಗಳು ದಾರುಣವಾಗಿ ಸಾವಿಗೀಡಾದ ಘಟನೆಯು ಭಟ್ಕಳ ನಗರವನ್ನು ಆಘಾತಕ್ಕೊಳಪಡಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. 26ರಂದು ಹಳಿಯಾಳ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹಳಿಯಾಳ: ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ನಿಗದಿಯಾಗಿದ್ದು, ಡಿ. 26ರಂದು ಪಟ್ಟಣದ ಪುರಭವನದಲ್ಲಿ ಸಮ್ಮೇಳನ ನಡೆಯಲಿದೆ. ಸರ್ವಾಧ್ಯಕ್ಷರಾಗಿ ಕೃಷಿ ವಿಜ್ಞಾನಿ ಹಾಗೂ ಲೇಖಕ ದೇಮಣ್ಣ ನಾಗಪ್ಪ ಕಾಂಬ್ರೇಕರ ಅವರು ಆಯ್ಕೆಯಾಗಿದ್ದಾರೆ.ಪಟ್ಟಣದ ಚಂದಾವನದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸುಮಂಗಲಾ ಅಂಗಡಿಯವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಭೆಯಲ್ಲಿ ದೇಮಣ್ಣ ನಾಗಪ್ಪ ಕಾಂಬ್ರೇಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಜಿಲ್ಲಾ ಪದಾಧಿಕಾರಿ ಸಿದ್ದಪ್ಪ ಬಿರಾದಾರ್, ತಾಲೂಕು ಗೌರವ ಕಾರ್ಯದರ್ಶಿ ಶಾಂತಾರಾಮ ಚಿಬುಲಕರ, ಬಸವರಾಜ ಇಟಗಿ, ಕಾಳಿದಾಸ ಬಡಿಗೇರ, ಝಾಕೀರ ಜಂಗೂಬಾಯಿ, ಜಿ.ಡಿ. ಗಂಗಾಧರ್, ಗೋಪಾಲ ಮೇತ್ರಿ, ಶ್ರೀಶೈಲ್ ಹುಲ್ಲೇನವರ, ಗೋಪಾಲ ಅರಿ, ಕಲ್ಪನಾ ಹುದ್ದಾರ, ಸುಗುಣಾ ಹೆಗಡೆ ಉಪಸ್ಥಿತರಿದ್ದರು.ಸಮ್ಮೇಳನಾಧ್ಯಕ್ಷರ ಪರಿಚಯ: ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯ ಶೇಕನಕಟ್ಟಾ ಗ್ರಾಮದಲ್ಲಿ 1974ರಲ್ಲಿ ದೇಮಣ್ಣ ನಾಗಪ್ಪ ಕಾಂಬ್ರೇಕರ ಜನಿಸಿದರು. ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನ್ನದಾತರ ನೆರವಿಗಾಗಿ ವಿವಿಧ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ, ಜೈವಿಕ ಪೀಡೆನಾಶಕಗಳ ಬಳಕೆ, ಜೇನುಕೃಷಿ ಹಾಗೂ ಕೃಷಿ ಆಧರಿತ ವಿಷಯಗಳ 250ಕ್ಕೂ ಹೆಚ್ಚು ಲೇಖನಗಳನ್ನು ಹಾಗೂ 8 ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದಾರೆ.