ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿ ೨೦೨೫ನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಉಡುಪಿ: ಉಡುಪಿ ಜಿಲ್ಲೆಯನ್ನು ಶಿಕ್ಷಣದ ಕಾಶಿಯೆಂದು ಕರೆಯುತ್ತಾರೆ, ಪ್ರತಿವರ್ಷ ಹತ್ತನೇ ಮತ್ತು ಪಿಯುಸಿ ತರಗತಿಗಳ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ, ದ್ವಿತೀಯ ಸ್ಥಾನ ಪಡೆಯುತ್ತಿದೆ. ಇದೀಗ ಜಿಲ್ಲೆ ಪಠ್ಯೇತರ ವಿಷಯಗಳಲ್ಲಿಯೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದ್ದಾರೆ.
ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿ ೨೦೨೫ ಉದ್ಘಾಟಿಸಿ ಅವರು ಮಾತನಾಡಿದರು.ಸಂಸ್ಥೆ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಡಾ.ರೋಕ್ ಡಿ’ಸೋಜ ಸ್ಪರ್ಧಾಳುಗಳಿಗೆ ಶುಭಾ ಹಾರೈಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎ ಗಫೂರ್, ಡಯೆಟ್ ಉಡುಪಿ ಪ್ರಾಂಶುಪಾಲ ಆಶೋಕ್ ಕಾಮತ್, ಚರ್ಚಿನ ಸಹಾಯಕ ಧರ್ಮಗುರು ಫಾ.ರೋಹನ್, ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ, ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ನೋಡಲ್ ಅಧಿಕಾರಿ ನಾಗರಾಜ್ ಭಟ್ ಪ್ರಾಸ್ತವಿಕ ನುಡಿಗಳನನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸ್ವಾಗತಿಸಿದರು ಪ್ರಶಾಂತ್ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಮತ್ತು ಜಯಲಕ್ಷ್ಮಿ ನಿರೂಪಿಸಿದರು. ಬ್ರಹ್ಮಾವರ ತಾಲೂಕಿನ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಟ್ಟು ೧೫೦೦ ವಿದ್ಯಾರ್ಥಿಗಳು ೩೭ ವಿಭಾಗಗಳಲ್ಲಿ ಸ್ಫರ್ಧಿಸಿದರು. ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಶಿಕ್ಷಕಿ ವನಿತಾ ಫೆರ್ನಾಂಡಿಸ್ ಕಾರ್ಯಕ್ರಮ ಸಂಯೋಜನೆ ಮಾಡಿದರು.