ನ್ಯಾಯಬೆಲೆ ಅಂಗಡಿಗಳಲ್ಲಿ ಏಕರೂಪ ಕಮಿಷನ್ ಜಾರಿ ಮಾಡಲಿ: ಟಿ. ಕೃಷ್ಣಪ್ಪ

| Published : Nov 05 2024, 12:36 AM IST

ನ್ಯಾಯಬೆಲೆ ಅಂಗಡಿಗಳಲ್ಲಿ ಏಕರೂಪ ಕಮಿಷನ್ ಜಾರಿ ಮಾಡಲಿ: ಟಿ. ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದಲ್ಲಿ ದೇಶದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕರೂಪದ ಕಮಿಷನ್ ನೀಡುವ ಯೋಜನೆ ಜಾರಿ ಆಗಬೇಕು ಎಂದು ಟಿ. ಕೃಷ್ಣಪ್ಪ ಹೇಳಿದರು.

ಗದಗ: ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ದೇಶಾದ್ಯಂತ ಏಕರೂಪದ ಆಹಾರ ಭದ್ರತೆ ಯೋಜನೆಯಂತೆ ಎಲ್ಲ ರಾಜ್ಯಗಳಲ್ಲೂ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕ ರೂಪದ ಕಮಿಷನ್ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ನ್ಯಾಯಬೆಲೆ ಪಡಿತರ ವಿತರಕ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದಲ್ಲಿ ದೇಶದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕರೂಪದ ಕಮಿಷನ್ ನೀಡುವ ಯೋಜನೆ ಜಾರಿ ಆಗಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಮಾದರಿಯಲ್ಲಿ ಪಡಿತರ ನೀಡುವ ರೂಢಿ ಇದೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಜತೆ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಜಾರಿಗೆ ತಂದರೆ ಕಬ್ಬು ಬೆಳೆಗಾರರಿಗೆ, ಇತರ ಕೃಷಿ ಉತ್ಪನ್ನ ಪಡೆಯುವ ರೈತರಿಗೆ ಅನುಕೂಲ ಆಗುತ್ತದೆ. ರೈತರು ಆರ್ಥಿಕ ಸ್ವಾವಲಂಬಿಗಳಾಗುತ್ತಾರೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಮೊತ್ತದ ಕಮಿಷನ್ ನೀಡುವ ಯೋಜನೆ ಜಾರಿಯಲ್ಲಿದೆ. ಗೋವಾ ರಾಜ್ಯದಲ್ಲಿ ಪ್ರತಿ ಕ್ವಿಂಟಲ್‌ಗೆ ₹300 ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೇವಲ ₹150 ಸರ್ಕಾರದಿಂದ ಕಮಿಷನ್ ವಿತರಣೆ ಆಗುತ್ತಿದೆ. ದೇಶಾದ್ಯಂತ ಆಹಾರಭದ್ರತೆ ಯೋಜನೆಯಡಿ ಪ್ರತಿಯೊಬ್ಬರಿಗೂ ₹5 ಕೆಜಿ ಅಕ್ಕಿ ನೀಡುವ ಕೇಂದ್ರ ಸರ್ಕಾರ, ಅದೇ ಮಾದರಿಯಂತೆ ಏಕರೂಪ ಕಮಿಷನ್ ಯೋಜನೆ ಜಾರಿ ಮಾಡಬೇಕು. ರಾಜ್ಯದಲ್ಲಿ ಇರುವ ಕಮಿಷನ್ ದರವನ್ನು ಅಧಿಕಗೊಳಿಸಬೇಕು. ಪಡಿತರ ಬದಲಾಗಿ ಡಿಬಿಟಿ ಮೂಲಕ ನಗದು ವರ್ಗಾವಣೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಪಡಿತರ ವಿತರಣೆ ಕುರಿತು ಸಮೀಕ್ಷೆ ನಡೆಸಿದೆ. ಪಡಿತರ ಬೇಕೋ? ಪಡಿತರ ಪರವಾಗಿ ಹಣ ಬೇಕೋ ಎಂದು ಸಮೀಕ್ಷೆ ನಡೆಸಲಾಗಿದ್ದು, ಶೇ. 95ಕ್ಕೂ ಅಧಿಕ ಜನರು ಹಣದ ಬದಲಾಗಿ ಪಡಿತರ ಬೇಕು ಎಂದು ಆಗ್ರಹಿಸಿದ್ದಾರೆ. ಸಮೀಕ್ಷಾ ವರದಿ ಸರ್ಕಾರದ ಕೈ ಸೇರಿದೆ ಮತ್ತು ಎರಡು ಬಾರಿ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆದರೂ ಸರ್ಕಾರ ವರದಿಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಚನ್ನಕೇಶವ ಗೌಡ, ಪ್ರಭು ಶೆಟ್ಟರ, ದೇವರಾಜು, ನವೀನ ನಾಲವಾಡ, ಬಸವರಾಜ ಜಿ., ನರೇಶ ಬುರುಬುರೆ, ಲಿಂಗಯ್ಯ ಧನ್ನೂರಮಠ, ಗೋಪಾಲ್ ಕಲಬುರ್ಗಿ, ಮುತ್ತನಗೌಡ ಪಾಟೀಲ ಇತರರು ಇದ್ದರು.