ಸಾರಾಂಶ
ಹಾಸನದ ಕೃಷ್ಣಾ ನಗರದಲ್ಲಿ ನಡೆದ ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡುವ ವೇಳೆ "ನಾವೆಲ್ಲಾ ಸೇರಿ ಜೆಡಿಎಸ್ಸನ್ನು ಕಟ್ಟೋಣ " ಎಂದು ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಹೇಳಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಆದರೂ ಅಭ್ಯಾಸಬಲ ಎನ್ನುವಂತೆ ಅವರ ಬಾಯಿಂದ ಜೆಡಿಎಸ್ ಇನ್ನೂ ದೂರಾಗಿಲ್ಲ.
ಕನ್ನಡಪ್ರಭ ವಾರ್ತೆ ಹಾಸನ
ಜೆಡಿಎಸ್ ಪಕ್ಷದ ಮೂಲಕವೇ ತಮ್ಮ ರಾಜಕೀಯ ಜೀವನ ಆರಂಭಿಸಿದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಆದರೂ ಅಭ್ಯಾಸಬಲ ಎನ್ನುವಂತೆ ಅವರ ಬಾಯಿಂದ ಜೆಡಿಎಸ್ ಇನ್ನೂ ದೂರಾಗಿಲ್ಲ.ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಹಾಸನದ ಕೃಷ್ಣಾ ನಗರದಲ್ಲಿ ನಡೆದ ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡುವ ವೇಳೆ "ನಾವೆಲ್ಲಾ ಸೇರಿ ಜೆಡಿಎಸ್ಸನ್ನು ಕಟ್ಟೋಣ " ಎಂದು ಹೇಳಿದ್ದಾರೆ.
ಸಮಾವೇಶದ ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಈ ವೇಳೆ ಶಿವಲಿಂಗೇಗೌಡರಿಗೆ ಸ್ವಾಗತ ಕೋರುವುದನ್ನು ಮರೆತಿದ್ದರು. ಇದರಿಂದ ಶಿವಲಿಂಗೇಗೌಡರು ಅಸಮಾಧಾನಗೊಂಡಿದ್ದರು. ಸ್ವಾಗತ ಮುಗಿದು ಒಂದಿಬ್ಬರು ಮಾತನಾಡಿದ ನಂತರ ಶಿವಲಿಂಗೇಗೌಡರಿಗೆ ಮಾತನಾಡುವ ಅವಕಾಶ ಬಂದಿತ್ತು. ಈ ವೇಳೆ ಮಾತನಾಡುತ್ತಾ ಇ ಡಿ ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಎಲ್ಲಿದೆ ಜೆಡಿಎಸ್ ಭದ್ರಕೋಟೆ. ಹಾಸನ ಜಿಲ್ಲೆಯಲ್ಲಿ ೨೮ ವರ್ಷಗಳ ನಂತರ ಸಂಸದ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದು ವಾಕ್‌ಪ್ರಹಾರ ನಡೆಸುತ್ತಲೇ " ನಾವೆಲ್ಲಾ ಒಂದಾಗಿ ಈ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟುತ್ತೇವೆ " ಎಂದು ಹೇಳಿ ತಮ್ಮ ಭಾಷಣ ಮುಗಿಸಿದರು.