ಸಾರಾಂಶ
ತಾಳಿಕೋಟೆ ಪಟ್ಟಣದ ಶ್ರೀ ಸಂಗಮಾರ್ಯ ವಿದ್ಯಾಸಂಸ್ಥೆಯಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
೧೨ನೇ ಶತಮಾನದಲ್ಲಿ ಜನಸಿ ವಚನಗಳ ಮೂಲಕ ಜನರಲ್ಲಿರುವ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸುವುದರೊಂದಿಗೆ ಸಮಾನತೆ, ಏಕತೆ ಭಾವನೆ ಎಲ್ಲರಲ್ಲಿ ತರುವಲ್ಲಿ ಬಸವಣ್ಣನವರು ಯಶಸ್ವಿಯಾಗಿದ್ದರು ಎಂದು ಸಂಗಮಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಹೇಳಿದರು.ಪಟ್ಟಣದ ಶ್ರೀ ಸಂಗಮಾರ್ಯ ವಿದ್ಯಾಸಂಸ್ಥೆಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪುರುಷನಷ್ಟೇ ಮಹಿಳೆಯರಿಗೂ ಕೂಡಾ ಎಲ್ಲದರಲ್ಲಿ ಸಮಾನತೆ ಸಿಗಬೇಕೆಂಬ ಬಸವಣ್ಣನವರ ದಿಟ್ಟ ನುಡಿಯಿಂದ ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷನಷ್ಟೇ ಮಹಿಳೆಯು ಸ್ಥಾನಮಾನ ಹೊಂದಿದ್ದಾಳೆ. ಇಂತಹ ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮಲಿಹಾಳ ಗ್ರಾಮದ ಹಿರಿಯರಾದ ನಿಂಗನಗೌಡ ತುಂಬಗಿ ಮಾತನಾಡಿ, ಸಮಾನತೆ, ಏಕತೆ, ಭಾತೃತ್ವ ಭಾವನೆ ಎಲ್ಲರಲ್ಲಿ ಬರಬೇಕಾಗಿದೆ ಎಂಬ ಚಿಂತನೆಯೊಂದಿಗೆ ಬಸವಣ್ಣನವರು ಕೆಳವರ್ಗದ ಜನರ ಮೇಲೆ ಅತ್ಯಂತ ಪ್ರೀತಿ ತೋರಿಸುವುದರೊಂದಿಗೆ ಅವರಿಗೆ ಕಾಯಕದ ಮೂಲಕ ಆರ್ಥಿಕವಾಗಿ, ಸಮಾಜಿಕವಾಗಿ ಮೇಲೆ ಬರಲು ದಾರಿ ತೋರಿಸಿದ್ದರು. ಬಸವಣ್ಣವರ ವಚನಗಳು ಇಂದಿಗೂ ಎಂದಿಗೂ ಆದರ್ಶ ಪ್ರೀಯವಾಗಿ ಉಳಿಯಲಿವೆ. ಅವುಗಳನ್ನು ಓದುವುದಷ್ಠೇ ಅಲ್ಲದೇ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು.ಉಪನ್ಯಾಸಕ ಎಸ್.ವ್ಹಿ.ಜಾಮಗೊಂಡಿ ಮಾತನಾಡಿ, ಬಸವಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು. ಜನರಲ್ಲಿರುವ ಮೂಢನಂಬಿಕೆ ಜಗತ್ತಿನ ಅಂಧಕಾರ ಹೋಗಲಾಡಿಸಿದ್ದಾರೆಂದರು.
ಬಸವಣ್ಣನವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ ಪುಷ್ಪಮಾಲೆ ಹಾಕಿ ಪೂಜೆ ಸಲ್ಲಿಸಿದರು. ವೇದಿಕೆ ಮೇಲೆ ಸಂಸ್ಥೆ ಆಡಳಿತಾಧಿಕಾರಿ ಕಿರಣ ಪಾಟೀಲ, ರವಿ ಪಾಟೀಲ, ವಿದ್ಯಾಸಂಸ್ಥೆ ಪ್ರಾಚಾರ್ಯ ಡಾ.ಎಚ್.ಬಿ.ನಡುವಿನಕೇರಿ, ಶಿವುಕುಮಾರ ನಾಯಕ, ವಿರೇಶ ಕನಕ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆ ಮುಖ್ಯಗುರು ಜೆ.ಎಂ.ಕೊಣ್ಣೂರ, ಮೀರಾ ದೇಶಪಾಂಡೆ, ಎಸ್.ಬಿ.ಮಂಗ್ಯಾಳ ಹಾಗೂ ಸಂಸ್ಥೆ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಹಿರಿಯ ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿ ವಂದಿಸಿದರು.