ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡ ರಾಜ್ಯೋತ್ಸವ ಕೇವಲ ಘೋಷಣೆ- ಭಾಷಣಗಳಿಗೆ ಸೀಮಿತಗೊಳ್ಳದೇ ಕನ್ನಡ ಜಾಗೃತಿಯ ವೇದಿಕೆಯಾಗಬೇಕು. ಯಾವುದೇ ಜಾತಿ ಮತ, ಭಾಷೆ-ಬಣ್ಣಗಳ ಹಂಗಿಲ್ಲದೆ ಆಚರಿಸುವ ಹಬ್ಬವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ನಗರದ ನೆಹರು ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಕನ್ನಡದ ಉಳಿವಿಗೆ ಸಂಕಲ್ಪ ಮಾಡಬೇಕಾಗಿದೆ. ಅಂದು ಮೈಸೂರು ರಾಜ್ಯವಾಗಿದ್ದ ಕರ್ನಾಟಕ 1956 ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂದ ಈ ದಿನವನ್ನು ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. ದೇವರಾಜ ಅರಸುರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973ರ ನವೆಂಬರ್ ನಲ್ಲಿ ಕರ್ನಾಟಕ ಎಂದು ಮರುನಾಮಕರಣವಾಯಿತು ಎಂದರು.
ಕರ್ನಾಟಕ ಏಕೀಕರಣಕ್ಕೆ ಕಾರಣರಾದ ಕುವೆಂಪು, ಆಲೂರು ವೆಂಕಟರಾವ್, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ. ಎಂ.ಶ್ರೀಕಂಠಯ್ಯ ಸೇರಿದಂತೆ ಅನೇಕ ಮಹನೀಯರನ್ನು ನಾವಿಂದು ಸ್ಮರಿಸಬೇಕಾಗಿದೆ. ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಹಲವಾರು ಜನಪರ ಚಳುವಳಿಗಳನ್ನು ಹುಟ್ಟು ಹಾಕಿದ ಈ ನೆಲ, ಸಾಮಾಜಿಕವಾಗಿ, ಶ್ರೀಮಂತವಾಗಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಈ ಜಿಲ್ಲೆ ಹೆಸರುವಾಸಿಯಾಗಿದೆ ಎಂದರು.ಅನುಭವ ಮಂಟಪದ ಅಲ್ಲಮಪ್ರಭು ಬಳ್ಳಿಗಾವಿಯವರು. 19ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಉಡುತಡಿಯವರು. ಶರಣ ಚಿಂತನೆಗಳ ನೆಲೆವೀಡು ಎಂದೇ ಖ್ಯಾತವಾದ ಕಲ್ಯಾಣ ಚಳುವಳಿಯ ಮೇರು ವ್ಯಕ್ತಿತ್ವಗಳು ಶಿವಮೊಗ್ಗ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಕನ್ನಡ ಸಾರಸ್ವತ ಲೋಕಕ್ಕೆ ಜಿ.ಎಸ್. ಶಿವರುದ್ರಪ್ಪರವರಂತಹ ರಾಷ್ಟ್ರಕವಿಯನ್ನು ಕೊಟ್ಟ ಹಿರಿಮೆ ಅಷ್ಟೇ ಅಲ್ಲ ಕುವೆಂಪು ಮತ್ತು ಯು.ಆರ್. ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರನ್ನು, ನಾಡಿಗೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದ ಹಿರಿಮೆ ಶಿವಮೊಗ್ಗ ಜಿಲ್ಲೆಯದ್ದು. ಅಲ್ಲದೇ ನಾ.ಡಿಸೋಜ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೊಂಡಾಡಿದರು.
ಇಡೀ ದೇಶದಲ್ಲೇ 2ನೇ ಅತಿಹೆಚ್ಚು ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ, ನಮ್ಮ ಶಿಕ್ಷಣ ನೀತಿಯ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಈ ರಾಜ್ಯೋತ್ಸವದ ಭಾಷಾಭಿಮಾನ ನವೆಂಬರ್‌ಗೆ ಸೀಮಿತವಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡ ಡಿಂಡಿಮ ಮೊಳಗಬೇಕು ಎಂದರು.ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಎಲ್ಲಾ ಜಾತಿ ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಇದ್ದರು. ಇದಕ್ಕೂ ಮುಂಚೆ ನಗರದ ಸೈನ್ಸ್ ಮೈದಾನದಿಂದ ನೆಹರೂ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಭಾರತ ಸೇವಾದಳದ ವೈ.ಎಚ್. ನಾಗರಾಜ್ ಮುಂತಾದವರಿದ್ದರು.-------
ಕನ್ನಡ ನೆಲ, ಜಲ, ಜನ, ಬದುಕು, ಸಂಸ್ಕೃತಿ, ಪರಂಪರೆ, ಕಲೆ, ಸಂಗೀತ, ಜನಪದ ಎಲ್ಲವನ್ನೂ ಒಳಗೊಂಡ ಕನ್ನಡ ಶ್ರೀಮಂತ ಸಂಸ್ಕೃತಿ ಹಾಗೂ ಭವ್ಯ ಪರಂಪರೆಯನ್ನು ಹೊಂದಿದ್ದು, ವಿಶ್ವಮಾನ್ಯವಾಗಿದೆ. ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಭವ್ಯ ಇತಿಹಾಸವಿದೆ.-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
;Resize=(128,128))
;Resize=(128,128))