ಶಾಲಾ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ನಾವೆಲ್ಲರೂ ಶ್ರಮಿಸೋಣ: ಶಾಸಕ ಸುರೇಶ್‌ ಬಾಬು

| Published : Nov 14 2025, 01:00 AM IST

ಶಾಲಾ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ನಾವೆಲ್ಲರೂ ಶ್ರಮಿಸೋಣ: ಶಾಸಕ ಸುರೇಶ್‌ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿಭೇದವಾಗಲಿ ಮಾಡದೆ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರು ಮಾಡುತ್ತಿರುವ ''ಮನೆ ಮಗ'' ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಈ ರೀತಿ ಎಂಎಲ್‌ಎಗಳು ಜನರಿಗೆ ಸಿಗುತ್ತಿರುವುದು ಇದೇ ಮೊದಲು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಸಮೀಪದ ಬಳ್ಳೇಕಟ್ಟೆ ಗ್ರಾಮದಲ್ಲಿ 10 ಲಕ್ಷ ರು. ಅನುದಾನದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ಮ- ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಹೊಸ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಸಿ.ಬಿ. ಸುರೇಶ್‌ ಬಾಬು ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಮಕ್ಕಳ ಭವಿಷ್ಯ ಮತ್ತು ಅವರ ಉತ್ತಮ ಶಿಕ್ಷಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಪೋಷಕರೂ ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸಬೇಕು ಎಂಬ ಆಲೋಚನೆ ಹೊಂದಿರುತ್ತಾರೆ. ಅವರ ಮುಂದಿನ ಭವಿಷ್ಯ ರೂಪಿಸಲು ನಾವೆಲ್ಲರೂ ದುಡಿಯುತ್ತಿದ್ದು, ಈ ಗ್ರಾಮ ಸೇರಿದಂತೆ ಇಡೀ ತಾಲೂಕಿನ ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ 45 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಇಲ್ಲಿ ಉತ್ತಮ ಶಾಲಾ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ಬಸ್ ನಿಲುಗಡೆಗೆ ಭರವಸೆ:

ಗ್ರಾಮದ ಮುಖ್ಯಸ್ಥರು ಮನವಿ ಮಾಡಿದಂತೆ, ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಕೆಎಸ್‌ಆರ್‌ಟಿಸಿ ಡೀಸಿ ಅವರೊಂದಿಗೆ ಮಾತನಾಡಿದ ಶಾಸಕರು ಈ ಬಗ್ಗೆ ಆದೇಶ ಹೊರಡಿಸುವ ಭರವಸೆ ನೀಡಿದರು.

ಪಾರದರ್ಶಕ ಆಡಳಿತ:

ವೈಯಕ್ತಿಕ ಅಥವಾ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಹಾಗೂ ಕ್ಷೇತ್ರದ ಸಮಸ್ಯೆ ಹೊತ್ತು ನನ್ನ ಬಳಿ ಬರುವವರು ಮಧ್ಯವರ್ತಿಗಳನ್ನು ಆಶ್ರಯಿಸದೆ , ನೇರವಾಗಿ ಬರಬೇಕು ಎಂದು ತಾಕೀತು ಮಾಡಿದರು.

ಜನರ ಸಮಸ್ಯೆ ಬಗೆಹರಿಸುವ ಸಲುವಾಗಿಯೇ ನಾನು ಕಳೆದ ಸುಮಾರು 87 ವಾರಗಳಿಂದ ಸತತವಾಗಿ ಜನಸ್ಪಂದನೆ ಕಾರ್ಯಕ್ರಮ ನಡೆಸುತ್ತಿದ್ದು, ಸಾಕಷ್ಟು ಸಮಸ್ಯೆಗಳು ಬಗೆಹರಿದಿವೆ. ಪ್ರತಿ ಮನೆ ಮನೆಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವ ''''ಮನೆ ಬಾಗಿಲಿಗೆ ಮನೆ ಮಗ'''' ಕಾರ್ಯಕ್ರಮದಿಂದಲೂ ಸಣ್ಣಪುಟ್ಟ ಸಮಸ್ಯೆಗಳು ಪರಿಹಾರವಾಗುತ್ತಿವೆ ಎಂದರು.

ಶಿಕ್ಷಣಕ್ಕೆ ಪ್ರೋತ್ಸಾಹ:

ಮಕ್ಕಳ ಭವಿಷ್ಯ ರೂಪಿಸಲು, ಅವರಿಗೆ ಉಚಿತವಾಗಿ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಅಗತ್ಯವಿರುವ ಮಕ್ಕಳಿಗೆ ಲ್ಯಾಪ್‌ಟಾಪ್‌ನಂತಹ ಸೌಕರ್ಯಗಳನ್ನು ಸಹ ನೀಡಲಾಗುತ್ತಿದೆ ಎಂದರು.

ದೊಡ್ಡಬಿದರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಳ್ಳೇಕಟ್ಟೆ ರಂಗಸ್ವಾಮಿ ಮಾತನಾಡಿ, ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಸುರೇಶ್‌ ಬಾಬು ಅವರು ಪಕ್ಷಭೇದವಾಗಲಿ, ಜಾತಿಭೇದವಾಗಲಿ ಮಾಡದೆ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರು ಮಾಡುತ್ತಿರುವ ''''ಮನೆ ಮಗ'''' ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಈ ರೀತಿ ಎಂಎಲ್‌ಎಗಳು ಜನರಿಗೆ ಸಿಗುತ್ತಿರುವುದು ಇದೇ ಮೊದಲು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

38 ಜಾತಿಗಳನ್ನು ಒಗ್ಗೂಡಿಸಿ ಸರ್ವಧರ್ಮ ಸಮಾವೇಶದಂತಹ ಕಾರ್ಯಕ್ರಮ ಮಾಡಲು ಶಾಸಕರು ಮುಂದಾಗುತ್ತಿರುವುದು ಉತ್ತಮ ಕೆಲಸ ಎಂದರು.

ದೊಡ್ಡಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಲಿನಿ, ಉಪಾಧ್ಯಕ್ಷರಾದ ರತ್ನಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಹೊನ್ನಪ್ಪ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.