ಅಭಿವೃದ್ಧಿ ವೇಗಗೊಳಿಸಲು ಎಲ್ಲರೂ ಶ್ರಮಿಸೋಣ

| Published : Jul 06 2024, 12:45 AM IST

ಅಭಿವೃದ್ಧಿ ವೇಗಗೊಳಿಸಲು ಎಲ್ಲರೂ ಶ್ರಮಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಜುಲೈ 4 ರಿಂದ ಸೆಪ್ಟೆಂಬರ್ ೩೦ರವರೆಗೆ ಸಂಪೂರ್ಣತಾ ಅಭಿಯಾನ ಉತ್ಸವ ನಡೆಯಲಿದೆ. ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಆರು ಪ್ರಮುಖ ಕಾರ್ಯಕ್ಷಮತೆ ಸೂಚಕಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಇದು ಮುಂದಿನ 90 ದಿನಗಳಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣವನ್ನು ವೇಗಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಜುಲೈ 4 ರಿಂದ ಸೆಪ್ಟೆಂಬರ್ ೩೦ರವರೆಗೆ ಸಂಪೂರ್ಣತಾ ಅಭಿಯಾನ ಉತ್ಸವ ನಡೆಯಲಿದೆ. ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಆರು ಪ್ರಮುಖ ಕಾರ್ಯಕ್ಷಮತೆ ಸೂಚಕಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಇದು ಮುಂದಿನ 90 ದಿನಗಳಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣವನ್ನು ವೇಗಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ನೀತಿ ಆಯೋಗ, ಜಿಲ್ಲಾಡಳಿತ, ಜಿಪಂ ವಿಜಯಪುರ ಮತ್ತು ತಾಲೂಕು ಆಡಳಿತ, ತಾಪಂ ತಾಳಿಕೋಟೆ ಸಹಯೋಗದೊಂದಿಗೆ ಆಯೋಜಿಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕುಗಳಿಗೆ ಆರೋಗ್ಯ, ಪೋಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ ಆರಂಭಿಸಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ನೀತಿ ಆಯೋಗದಡಿ ಜಿಲ್ಲೆಯ ತಾಳಿಕೋಟೆ ತಾಲೂಕನ್ನು ಮಹತ್ವಾಕಾಂಕ್ಷಿ ತಾಲೂಕು ಎಂದು ಆಯ್ಕೆಮಾಡಲಾಗಿದೆ. ಸದ್ಯ ಆಯ್ಕೆ ಮಾಡಲಾದ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಸೇವಾ ವಲಯಗಳಾದ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ, ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನಮಟ್ಟ ಎತ್ತರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ತಾಲೂಕಿನಲ್ಲಿ ೬ ಪ್ರಮುಖ ಸೂಚ್ಯಂಕಗಳ ಸಂಪೂರ್ಣತೆಯನ್ನು ಸಾಧಿಸಲು ಸುಸ್ಥಿರ ಪ್ರಯತ್ನ ಕೈಗೊಳ್ಳಲು ನೀತಿ ಆಯೋಗವು, ಇಂದಿನಿಂದ ೩ ತಿಂಗಳ ಕಾಲ ಸಂಪೂರ್ಣತಾ ಅಭಿಯಾನ ಹಮ್ಮಿಕೊಂಡಿದೆ. ಹಾಗಾಗಿ ಪ್ರಸವಪೂರ್ವ ಆರೈಕೆ ನೋಂದಣಿ, ಮಧುಮೇಹ ತಪಾಸಣೆ, ಅಧಿಕ ರಕ್ತದೊತ್ತಡ ಸ್ಕ್ರೀನಿಂಗ್, ಪೂರಕ ಪೋಷಣೆ, ಮಣ್ಣಿನ ಆರೋಗ್ಯ ಪರೀಕ್ಷೆ ಹಾಗೂ ಸ್ವಸಹಾಯ ಗುಂಪುಗಳಿಗೆ ಆವರ್ತ ನಿಧಿ ನೀಡುವ ಮೂಲಕ ಶೇ.೧೦೦ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಗರ್ಭಿಣಿಯರಿಗೆ ಸೀಮಂತ:

10 ಜನ ಗರ್ಭಿಣಿಯರಿಗೆ ತಾಯಿ ಕಾರ್ಡ್‌, ೫ ಜನ ಮೇಲ್ವಿಚಾರಕರಿಗೆ ಪೋಷಣ್ ಟ್ರ್ಯಾಕರ್ ಮೊಬೈಲ್, ೫ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್ ಹಾಗೂ ೨೦ ಜನ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು. ಈ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸಹಾಯಕ ಯೋಜನಾಧಿಕಾರಿ ಎ.ಬಿ.ಅಲ್ಲಾಪುರ ಅವರು ಸಂಪೂರ್ಣತಾ ಅಭಿಯಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಮಯದಲ್ಲಿ ನೀತಿ ಆಯೋಗದ ಸಹಾಯಕ ವಿಭಾಗ ಅಧಿಕಾರಿ ಬಬಿತಾ ಸೂರ್ಯವಂಶಿ, ಜಿಪಂ ಯೋಜನಾ ನಿರ್ದೇಶಕ ಸಿ.ವಿ.ದೇವರಮನೆ, ತಾಪಂ ಇಒ ಬಿ.ಆರ್.ಬಿರಾದಾರ, ಡಿಡಿಪಿಐ ಎನ್.ಎಚ್.ನಾಗೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ ಚವ್ಹಾಣ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಹಾಯಕ ಯೋಜನಾಧಿಕಾರಿ ಎ.ಬಿ.ಅಲ್ಲಾಪೂರ. ಟಿಎಚ್‌ಒ ಸತೀಶ ತಿವಾರಿ, ತಮದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ ಮಡಿವಾಳರ, ಆರ್.ಡಬ್ಲ್ಯುಎಸ್ ಎ.ಡಬ್ಲ್ಯು. ಹಿರೇಗೌಡ, ಹಿರೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಮಠ, ಕೊಡಗಾನೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಕಿರಣಗಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಪಿಡಿಒ ಬಿ.ಎಂ.ಸಾಗರ ಸ್ವಾಗತಿಸಿದರು. ಬಿ.ಆಯ್.ಹಿರೇಹೊಳಿ ನಿರೂಪಿಸಿದರು. ಎ.ಬಿ.ಇರಾಜ ವಂದಿಸಿದರು.

---

ಬಾಕ್ಸ್‌

ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು

ಜಲ ಜೀವನ ಮಿಷನ್, ತೋಟಗಾರಿಕೆ ಇಲಾಖೆಯ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಹಾಗೂ ನರೇಗಾ ಮಾಹಿತಿ ಕೇಂದ್ರ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮಳಿಗೆಗಳು ಗಮನ ಸೆಳೆದವು.

----

ತಮದಡ್ಡಿಯಲ್ಲಿ ಜೆಜೆಎಂ ಕಾಮಗಾರಿ ಪರಿಶೀಲನೆ

ತಾಳಿಕೋಟೆ ತಾಲೂಕಿಗೆ ಶುಕ್ರವಾರ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಮದಡಿ ಸಂಪೂರ್ಣತಾ ಅಭಿಯಾನದ ಉತ್ಸವ ನಿಮಿತ್ತ ನೀತಿ ಆಯೋಗದ ಸಹಾಯಕ ವಿಭಾಗ (ಆಡಳಿತ) ಅಧಿಕಾರಿ ಬಬಿತಾ ಸೂರ್ಯವಂಶಿ ಅವರು, ತಾಲೂಕಿನ ಹಿರೂರ ಗ್ರಾಪಂ ತಮದಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಮೂಲಭೂತ ಸೌಲಭ್ಯಗಳನ್ನು ವೀಕ್ಷಿಸಿದರು. ನಂತರ ತಮದಡ್ಡಿ ಗ್ರಾಮದ ಜೆ.ಜೆ.ಎಮ್ ಯೋಜನೆಯ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ನಂತರ ಕೊಡಗಾನೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬಿ.ಎಸ್.ಎನ್.ಎಲ್ ಸಂಪರ್ಕ ಪರಿಶೀಲಿಸಿದರು. ನಂತರ ತಾಳಿಕೋಟೆಯ ಪಶು ಆಸ್ಪತ್ರೆಗೆ ಭೇಟಿ ನೀಡಿ ಜಾನುವಾರುಗಳಿಗೆ ನೀಡುವ ಲಸಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.