ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ನಾಡು ಪ್ರಾಚೀನ ಕಾಲದಿಂದಲೂ ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡೆಂದು ಕರೆಸಿಕೊಂಡು ಸಂಪತ್ಭರಿತ ನಾಡಾಗಿದೆ. ಇಂದು ಕನ್ನಡನಾಡು ಸಮೃದ್ಧಿಯ ಬೀಡಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಬಾಗಲಕೋಟೆ ಸಹಯೋಗದಲ್ಲಿ ಕಾಲೇಜಿನ ವಿಶ್ವಮಾನವ ಸಭಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ನಮ್ಮ ಕನ್ನಡ ನಾಡು ಸುಂದರ ಘಟ್ಟಗಳ ನಾಡಾಗಿದೆ. ನದಿಗಳು ಹರಿಯುವ, ಸಾಧು-ಸಂತರು, ದಾಸರು-ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ನ.1ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲರೂ ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಹಿರಿಯರು ಕಟ್ಟಿಕೊಟ್ಟಿರುವ ಕನ್ನಡ ನಾಡು ಬೆಳೆಸೋಣ ಉಳಿಸೋಣ ಎಂದರು.ಶಿಕ್ಷಣ ಚಿಂತಕರಾದ ಶಂಕರಗೌಡ ಯಡಹಳ್ಳಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ. ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ.ಅರಣುಕುಮಾರ ಗಾಳಿ ಮಾತನಾಡಿ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕಲಿತವರಿಗೆ ಕನ್ನಡ, ನೆನೆದವರಿಗೆ ನೆರಳು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಎಂಬ ವಿಚಾರಗಳು ನಮ್ಮ ಕನ್ನಡಿಗರ ಹೆಮ್ಮೆ ಮತ್ತು ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ ಎಂದರು. ಮಹಾಂತೇಶ ನಾಲತ್ತವಾಡ ಮಾತನಾಡಿ, ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ಆಯೋಜನೆ ಮಾಡಿರುವುದು ಯುವ ಸಮೂಹದವರಲ್ಲಿ ಕನ್ನಡ ಪ್ರೇಮ ಬೆಳೆಸಲು ಪೂರಕವಾಗಿದೆ. ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಕನ್ನಡ ಭವ್ಯ ಪರಂಪರೆ, ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ ಮುಂಬರುವ ಕನ್ನಡಿಗರಿಗೆ ನೀಡುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ನಮ್ಮ ಕನ್ನಡ ಭಾಷೆ ವಿಶ್ವದಲ್ಲಿಯೇ ಶ್ರೀಮಂತವಾಗಿದೆ. ನಮ್ಮ ಕನ್ನಡದ ಕವಿಗಳು ಈ ನಾಡನ್ನು ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವುದರಿಂದ ಕನ್ನಡ ಸಮೃದ್ಧಿಯಾಗಿ ಬೆಳೆದಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ ಬೀಳಗಿ ವೇದಿಕೆ ಮೇಲಿದ್ದರು. ನಂತರ ಜಿಲ್ಲಾ ಮಟ್ಟದ ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ನಡೆದವು. ವಿದ್ಯಾರ್ಥಿಗಳು ಕನ್ನಡ ನಾಡುಗೀತೆ ಹಾಡಿದರು, ಡಾ.ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು, ಡಾ.ಸುಮಂಗಲಾ ಮೇಟಿ ನಿರೂಪಿಸಿದರು. ಪ್ರೊ.ಸಂಪತ್ತ ಲಮಾಣಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))