ಸಂವಿಧಾನಕ್ಕೆ ಧಕ್ಕೆ ತರದಂತೆ ದೇಶ ಕಟ್ಟೋಣ: ಮಂಜುನಾಥ

| Published : Feb 08 2024, 01:35 AM IST

ಸಂವಿಧಾನಕ್ಕೆ ಧಕ್ಕೆ ತರದಂತೆ ದೇಶ ಕಟ್ಟೋಣ: ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ಸದೃಢ ಭಾರತ ನಿರ್ಮಾಣ ಮಾಡೋಣ. ಸಂವಿಧಾನ ನೀಡಿರುವ ಜಾತ್ಯತೀತ ಹಾಗೂ ಸಮಾಜವಾದಿ ತತ್ವಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ.

ಹೂವಿನಹಡಗಲಿ: ತಾಲೂಕಿನ ಇಟಗಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಮಹಿಳೆಯರ ಪೂರ್ಣಕುಂಭೋತ್ಸವ ಹಾಗೂ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.

ಗ್ರಾಮದ ಮುಖ್ಯಬೀದಿಗಳಲ್ಲಿ ಸಂಚರಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮದ ಆಂಜನೇಯ ಸ್ವಾಮಿ ವೇದಿಕೆಯ ಮುಂಭಾಗದಲ್ಲಿ, ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಜಿಲ್ಲಾ ಸಮಾಜ ಇಲಾಖೆ ಉಪನಿರ್ದೇಶಕ ಮಂಜುನಾಥ ಮಾತನಾಡಿ, ಜಿಲ್ಲೆಯ 6 ತಾಲೂಕು ಕೇಂದ್ರಗಳ ವ್ಯಾಪ್ತಿಯ 137 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ರಥ ಸಂಚರಿಸುತ್ತಿದೆ. ಜತೆಗೆ ಜಾಥಾ ಹೋದ ಕಡೆ ಸಂವಿಧಾನ ಕುರಿತು ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ಮತ್ತು ಮಾಹಿತಿ ನೀಡಲಾಗುತ್ತಿದೆ ಎಂದರು.

ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ಸದೃಢ ಭಾರತ ನಿರ್ಮಾಣ ಮಾಡೋಣ. ಸಂವಿಧಾನ ನೀಡಿರುವ ಜಾತ್ಯತೀತ ಹಾಗೂ ಸಮಾಜವಾದಿ ತತ್ವಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ. ಆ ಹಿನ್ನೆಲೆ ಸಂವಿಧಾನ ರಥ ನಿರ್ಮಿಸಿ ಆ ಮೂಲಕ ಎಲ್ಲರಿಗೂ ಸಂವಿಧಾನ ಕುರಿತಾಗಿರುವ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಉಪತಹಸೀಲ್ದಾರ್‌ ಮಲ್ಲಿಕಾರ್ಜುನ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಇಡೀ ವಿಶ್ವವೇ ಮೆಚ್ಚುವ ಸಂವಿಧಾನ ನೀಡಿದ್ದಾರೆ. ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆಯಬೇಕೆಂಬುದು ಅವರ ಆಶಯವಾಗಿತ್ತು. ಇಂದು ಇಡೀ ವಿಶ್ವವನ್ನು ಜ್ಞಾನ ಆಳ್ವಿಕೆ ಮಾಡುತ್ತಿದೆ. ಶಿಕ್ಷಣಕ್ಕೆ ಅಂಥ ದೊಡ್ಡ ಶಕ್ತಿ ಇದೆ. ಆದ್ದರಿಂದ ಎಲ್ಲರೂ ಸಂವಿಧಾನದ ಆಶಯಗಳನ್ನು ಗೌರವಿಸೋಣ ಎಂದರು.

ಮೊರಾರ್ಜಿ ಶಾಲೆ ಶಿಕ್ಷಕ ಬಸವರಾಜ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷ ಬಿ. ಸಿದ್ದಪ್ಪ, ಉಪಾಧ್ಯಕ್ಷೆ ಲಕ್ಷ್ಮವ್ವ, ತಾಪಂ ಎಡಿ ಹೇಮಾದ್ರಿ ನಾಯ್ಕ, ಸಮಾಜ ಕಲ್ಯಾಧಿಕಾರಿ ಆನಂದ್‌ ಡೊಳ್ಳಿನ್‌, ಪಿಡಿಒ ಉಮೇಶ ಜಾಗೀದಾರ್‌ ಸೇರಿದಂತೆ ಆಶಾ ಕಾರ್ಯಕರ್ತೆಯರು, ವಿವಿಧ ಶಾಲೆಗಳ ಶಿಕ್ಷಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.