ಕನ್ನಡಪ್ರಭ ವಾರ್ತೆ ಗೋಕಾಕ ಲಿಂಗ ಭೇದ ಮಾಡಬಾರದು ಎಂದು ಬಸವಣ್ಣನವರು 12 ಶತಮಾನದಲ್ಲಿಯೇ ಹೇಳಿದ್ದರೂ ಅದು ಇಂದಿಗೂ ಪಾಲನೆಯಾಗದಿರುವುದು ವಿಷಾಧನೀಯ ಎಂದು ಪದ್ಮಶ್ರೀ ಪುರಸ್ಕೃತ ಸುನೀತಾ ಕೃಷ್ಣನ್ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಲಿಂಗ ಭೇದ ಮಾಡಬಾರದು ಎಂದು ಬಸವಣ್ಣನವರು 12 ಶತಮಾನದಲ್ಲಿಯೇ ಹೇಳಿದ್ದರೂ ಅದು ಇಂದಿಗೂ ಪಾಲನೆಯಾಗದಿರುವುದು ವಿಷಾಧನೀಯ ಎಂದು ಪದ್ಮಶ್ರೀ ಪುರಸ್ಕೃತ ಸುನೀತಾ ಕೃಷ್ಣನ್ ಬೇಸರ ವ್ಯಕ್ತಪಡಿಸಿದರು.ನಗರದ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠ ಕಾಯಕಯೋಗಿ ಲಿಂಗೈಕ ಬಸವ ಮಹಾಸ್ವಾಮಿಗಳ 21ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಸಮಾವೇಶ ಕಾಯಕಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಇಂದು ಹೆಣ್ಣು ಮಕ್ಕಳನ್ನು ಭೋಗದ ವಸ್ತು ಮಾಡಿ ಅವಮಾನಿಸುವ ಕಾರ್ಯ ನಡೆದಿರುವುದು ಬೇಸರ ತರಿಸುತ್ತಿದೆ. ಇಲ್ಲಿಯವರೆಗೆ 30 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿ ಅವರಿಗೆ ಸ್ವಯಂಉದ್ಯೋಗ ಒದಗಿಸಿರುವ ತೃಪ್ತಿ ಇದೆ. ಹೆಣ್ಣು ಮಕ್ಕಳಿಗೆ ಬುದ್ದಿ ಹೇಳುವ ಮೊದಲು ಗಂಡು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ನೀಡಬೇಕು. ಶೋಷಣೆ ಒಳಗಾದವರಿಗೆ ಸಹಾಯ ಮಾಡುವ ಬದಲು ಅವರಿಗೆ ಆತ್ಮಸ್ಥೈರ್ಯ ತುಂಬಿ ಪ್ರೀತಿಸುವ ಕೆಲಸವನ್ನು ಸಮಾಜ ಮಾಡಬೇಕು. ಈ ಸಮಾಜ ಬದಲಾಗಬೇಕಾದರೆ ನಾವು ಮೊದಲ ಬದಲಾಗಬೇಕು. ಕಾಯಕಶ್ರೀ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.ಬಸವಬೆಳವಿಯ ಚರಂತೇಶ್ವರಮಠದ ಬಸವ ಸ್ವಾಮೀಜಿ ಮಾತನಾಡಿ, ಶಿವಾನೂಭವವನ್ನು ಕೇಳಿ ಜೀವನದಲ್ಲಿ ಪಾಲಿಸಿಕೊಂಡು ಹಲವಾರು ಭಾರತೀಯ ಮಹಿಳೆಯರು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇತಿಹಾಸ ಓದಿದರೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗುತ್ತದೆ. 12 ಶತಮಾನದ ವಚನಕಾರರು, ಶರಣೆಯರನ್ನು ಆದರ್ಶವಾಗಿಟ್ಟುಕೊಂಡು ಜೀವನ ಸಾಗಿಸಬೇಕು. ದಿನನಿತ್ಯದ ಕಾರ್ಯಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ರೂಢಿ ಮಾಡಿಕೊಂಡು ಜೀವನವನ್ನು ಪಾವನವಾಗಿಸಿಕೊಳ್ಳಿ. ಗೋಕಾಕ ಭಾಗದಲ್ಲಿ ಶರಣ ಸಂಸ್ಕೃತಿಯನ್ನು ಪ್ರಚುರ ಪಡೆಸುವ ಮೂಲಕ ಈ ಭಾಗದಲ್ಲಿ ಬಸವಣ್ಣನವರ ತತ್ವ ಹರಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಸಮಾವೇಶವನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ವಹಿಸಿದ್ದರು. ಈ ವೇಳೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉದಯ ಜಾದೂಗರ ಜಾದೂ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಬಸವಧರ್ಮ ಪೀಠ ಕೂಡಲಸಂಗದ ಜಗದ್ಗುರು ಗಾಂಗಾಮಾತಾಜಿ, ಮುರುಘರಾಜೇಂದ್ರ ಮಹಾಸ್ವಾಮಿಗಳು, ಸರ್ವೋತ್ತಮ ಜಾರಕಿಹೊಳಿ, ಮಯೂರ ಶಿವಾಳಕರ, ರೂಪಾ ಮುನವಳ್ಳಿ, ವಿಜಯಲಕ್ಷ್ಮೀ ಸಿದ್ದಾಪೂರಮಠ, ನಿವೇದಿತಾ ಸಿದ್ನಾಳ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಗೋರೋಶಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಮಹಾಂತೇಶ ಕುಡಚಿ ಉಪಸ್ಥಿತರಿದ್ದರು.