ಕನ್ನಡ ಸಂಸ್ಕೃತಿ ಹಾಗೂ ಪರಂಪರೆ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ-ಡಿಸಿ ದಾನಮ್ಮನವರ

| Published : Nov 02 2024, 01:41 AM IST

ಕನ್ನಡ ಸಂಸ್ಕೃತಿ ಹಾಗೂ ಪರಂಪರೆ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ-ಡಿಸಿ ದಾನಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಕರ್ನಾಟಕದ ಪ್ರಜೆಗಳಾದ ನಾವು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಅಭಿಮಾನವಿರಿಸಿಕೊಂಡು, ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯ ಉಳಿಸಿ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ. ಅಖಂಡ ಕರ್ನಾಟಕದ ಕನಸು ಕಂಡ ನಮ್ಮ ಹಿರಿಯರ ಆಶಯದಂತೆ ಇಡೀ ಕರ್ನಾಟಕವನ್ನು ಒಂದಾಗಿ ಮುನ್ನಡೆಸೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಅಖಂಡ ಕರ್ನಾಟಕದ ಪ್ರಜೆಗಳಾದ ನಾವು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಅಭಿಮಾನವಿರಿಸಿಕೊಂಡು, ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯ ಉಳಿಸಿ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ. ಅಖಂಡ ಕರ್ನಾಟಕದ ಕನಸು ಕಂಡ ನಮ್ಮ ಹಿರಿಯರ ಆಶಯದಂತೆ ಇಡೀ ಕರ್ನಾಟಕವನ್ನು ಒಂದಾಗಿ ಮುನ್ನಡೆಸೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ ಹೇಳಿದರು.ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಈ ನಮ್ಮ ರಾಜ್ಯವು ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಅರಸರು, ಸಂತರು, ಕವಿಗಳು, ಬುದ್ಧಿಜೀವಿಗಳು, ಸಮಾಜ ಸುಧಾರಕರು, ಕಲಾವಿದರು ಪೋಷಿಸಿದ ನಾಡು ಇದಾಗಿದೆ. ಪಂಪ, ರನ್ನ, ಬಸವಾದಿ ಶರಣರು, ದಾಸಶ್ರೇಷ್ಠ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸ ಸೇರಿದಂತೆ ಅನೇಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ.ಕನ್ನಡ ಲಿಪಿ ಸುಮಾರು 1500-1600 ವರ್ಷಗಳಿಗಿಂತಲೂ ಹಿಂದಿನದು. ಐದನೇಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಕರ್ನಾಟಕವು ಈ ಮೊದಲು ಭಾಷಾವಾರು ಪ್ರಾಂತವಾಗಿ ಹರಿದುಹಂಚಿ ಹೋಗಿತ್ತು. ಆಗ ರಾಜ್ಯದಲ್ಲಿ ಅಖಂಡ ಕರ್ನಾಟಕದ ಹೋರಾಟ ಆರಂಭಗೊಂಡಿತು. ಈ ಹೋರಾಟವು ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆಗೆ ನಡೆಯಿತು. ಕನ್ನಡಿಗರು ಭಾವನಾತ್ಮಕವಾಗಿ ಒಂದಾಗಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದರು. ಆಲೂರು ವೆಂಕಟರಾವ್ ಅವರು 1905ರಲ್ಲಿ ಕರ್ನಾಟಕ ಏಕೀಕರಣ ಚಳವಳಿಗೆ ನಾಂದಿ ಹಾಡಿದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉದಯವಾಯಿತು. ಕರ್ನಾಟಕ ಏಕೀಕರಣಕ್ಕಾಗಿಯೇ ‘ಕರ್ನಾಟಕ ಏಕೀಕರಣ ಸಂಘ’ವು ರೂಪುಗೊಂಡಿತು ಎಂದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅಂದಿನ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿಯ ಜಿಲ್ಲೆಯ ಹೊಸಮನಿ ಸಿದ್ದಪ್ಪ, ಹಳ್ಳಿಕೇರಿ ಗುದ್ಲೆಪ್ಪ, ಟಿ.ಆರ್.ನೇಸ್ವಿ, ವೀರನಗೌಡ ಪಾಟೀಲ, ಕೆ.ಎಫ್. ಪಾಟೀಲ, ಪಂಚಾಕ್ಷರಪ್ಪ ಒಳಸಂಗದ, ಪಾಟೀಲ ಪುಟ್ಟಪ್ಪ, ಮಹದೇವ ಬಣಕಾರ, ಎಚ್.ಆರ್. ಇಟಗಿ, ವಿರೂಪಾಕ್ಷಪ್ಪ ಅಂಗಡಿ, ಬಸಯ್ಯ ಹಿರೇಮಠ, ಜಯಣ್ಣ ಚೌಶೆಟ್ಟಿ, ಮುರುಗಯ್ಯ ನಂದಿಮಠ, ಕೃಷ್ಣಾಜಿ ಚವ್ಹಾಣ್, ರುದ್ರಪ್ಪ ಜಾಬೀನ, ವೀರಭದ್ರಪ್ಪ ಹಾವನೂರ ಮತ್ತು ಅನೇಕರು ಏಕೀಕರಣ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದನ್ನು ಸ್ಮರಿಸಬಹುದಾಗಿದೆ ಎಂದರು. ಆಧುನಿಕ ಕಾಲದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾರತೀಯ ಭಾಷೆಗಳಲ್ಲಿ ಕನ್ನಡ ಭಾಷೆ ಒಂದೇ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನ ಡಾ.ವಿ.ಕೃ.ಗೋಕಾಕರು ಒಬ್ಬರು ಎಂಬುದು ಅಭಿಮಾನದ ಸಂಗತಿ ಎಂದರು. ಪ್ರಶಂಸಾ ಪತ್ರ ವಿತರಣೆ:

ಪಥಸಂಚಲನ ತಂಡಗಳಿಗೆ ಹಾಗೂ ನೃತ್ಯ ಪ್ರದರ್ಶನ ಮಾಡಿದ ಶಾಲಾ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ಕೆ. ಶಿರಕೋಳ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ತಹಸೀಲ್ದಾರ್‌ ಶರಣಮ್ಮ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು. ಶಿಸ್ತುಬದ್ಧ ಪಥಸಂಚಲನ: ಹಾವೇರಿ ಡಿ.ಆರ್.ನ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರೀಕರ ರಕ್ಷಣಾ ಪಡೆ, ಅಗ್ನಿ ಶಾಮಕ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಕೆಎಲ್‌ಇ ಪ್ರೌಢಶಾಲೆ, ಜೆಪಿ ರೋಟರಿ ಕನ್ನಡ ಮತ್ತು ಇಂಗ್ಲಿಷ ಮಾಧ್ಯಮ, ಹುಕ್ಕೇರಿಮಠ ಪ್ರೌಢಶಾಲೆ, ಗೆಳೆಯರ ಬಳಗ ಪ್ರೌಢಶಾಲೆ, ಸರ್ಕಾರಿ ಕನ್ನಡ ಪ್ರೌಢಶಾಲೆ, ಬಸವಭಾರತಿ ಪ್ರೌಢಶಾಲೆ, ಲಯನ್ಸ್ ಪ್ರೌಢಶಾಲೆ, ದಿವ್ಯ ಇಂಟನ್ಯಾಷನ್ ಸ್ಕೂಲ್ ಒಳಗೊಂಡಂತೆ 14 ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರುಗಿತು.ಗಮನಸೆಳೆದ ಮಕ್ಕಳ ನೃತ್ಯ: ಸೇಂಟ್ ಆನ್ಸ್, ವಿದ್ಯಾದಾಯಿನಿ, ನವಚೇತನ ಹಾಗೂ ಸಾಯಿಚಂದ್ರ ಗುರುಕುಲ ಶಾಲೆ ಮಕ್ಕಳು, ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಪರಂಪರೆ ಬಿಂಬಿಸುವ ಬಾರಿಸು ಕನ್ನಡ ಡಿಂಡಿಂವ ಓ ಕರ್ನಾಟಕ ಹೃದಯಶಿವ.., ಹಚ್ಚೆವು ಕನ್ನಡದ ದೀಪ..., ಒಂದೇ ಒಂದೇ ಕರ್ನಾಟಕ ಒಂದೇ..., ಹುಟ್ಟಿದರೇ ಕನ್ನಡನಾಡಲಿ ಹುಟ್ಟಬೇಕು..., ಕರುನಾಡೆ ಕೈಚಾಚಿದೇ ನೋಡೆ.. ಸೇರಿದಂತೆ ವಿವಿಧ ಹಾಡುಗಳಿಗೆ ಆಕರ್ಷಕ ನೃತ್ಯ ಪ್ರದರ್ಶನ ಮಾಡುವ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರರಾದರು.ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರ ಮೆರವಣಿಗೆ:ಕಾರ್ಯಕ್ರಮಕ್ಕೂ ಮೊದಲು ನಗರದ ಮೈಲಾರ ಮಹದೇವ ವೃತ್ತದಿಂದ ಆರಂಭಗೊಂಡ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾ ಕ್ರೀಡಾಂಗಣ ತಲುಪಿತು. ಮೆರವಣಿಗೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕಲಾತಂಡಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.