ವಾಲ್ಮೀಕಿ ಆದರ್ಶಗಳಿಂದ ನಾವು ಸ್ಪೂರ್ತಿ ಪಡೆಯೋಣ: ತಹಸೀಲ್ದಾರ

| Published : Oct 08 2025, 01:01 AM IST

ವಾಲ್ಮೀಕಿ ಆದರ್ಶಗಳಿಂದ ನಾವು ಸ್ಪೂರ್ತಿ ಪಡೆಯೋಣ: ತಹಸೀಲ್ದಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಕವಿ ವಾಲ್ಮೀಕಿಯವರು ರಾಮಾಯಣ ಬರೆಯುವ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಮಹಾಕವಿ ವಾಲ್ಮೀಕಿಯವರು ರಾಮಾಯಣ ಬರೆಯುವ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿದಿದ್ದಾರೆ. ರಾಮಾಯಣವು ಮಾನವಿಯ ಸಂಬಂಧಗಳ ಸರಳ ಸುಂದರ ನಿರೂಪಣೆಯಾಗಿದ್ದು, ಇದು ಮಾನಸಿಕ ಸ್ಪೂರ್ತಿಯಾಗಿದೆ ಎಂದು ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.

ಮಂಗಳವಾರ ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾನ್‌ ದಾರ್ಶನಿಕ ವಾಲ್ಮೀಕಿಯವರ ಆದರ್ಶಗಳನ್ನು ಪಾಲಿಸಿ ನಾವು ಪರಿವರ್ತನೆ ಹೊಂದುವ ಮೂಲಕ ಸಂಸ್ಕಾರಯುತ ಮಾನವೀಯ ಮೌಲ್ಯಗಳುಳ್ಳ ಸಮಾಜ ನಿರ್ಮಿಸೋಣ ಎಂದರು. ಆಧ್ಯಾತ್ಮಿಕ ನೆಲೆಯ ತಾಣ:

ವಾಲ್ಮೀಕಿ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ, ವಾಲ್ಮೀಕಿಯವರ ರಾಮಾಯಣದಿಂದಲೇ ಭಾರತವು ಅಧ್ಯಾತ್ಮಿಕ ನೆಲೆಯ ಪವಿತ್ರ ತಾಣವಾಯಿತು, ಭಾರತದ ಸಂಸ್ಕೃತಿಯ ಗರಿಮೆ ಮತ್ತು ಸಮಗ್ರತೆಯನ್ನು ಹೆಚ್ಚಿಸುವಲ್ಲಿ ವಾಲ್ಮೀಕಿಯವರ ಕೊಡುಗೆ ಅಪಾರವಾಗಿದೆ. ರಾಮಾಯಣದಲ್ಲಿ ಅವರು ದಶರಥ ಮಹಾರಾಜರ ಬಹುಪತ್ನಿತ್ವದೊಂದಿಗೆ ಅವರ ಪುತ್ರರಾದ ಶ್ರೀರಾಮರ ಏಕಪತ್ನಿವೃತ ಪಾಲನೆ ಹೀಗೆ ಅವರು ಉಲ್ಲೇಖಿಸಿದ ತಾತ್ವಿಕ ಚಿಂತಣೆಗಳು, ನೀತಿಭೋದೆಗಳು, ಧರ್ಮಭೋದನೆ, ರಾಜನೀತಿಗಳು ಸರ್ವಕಾಲಿಕ ಮಾದರಿಯಾಗಿವೆ. ವಾಲ್ಮೀಕಿ ಗುರುವಾಗಿ ಹಲವಾರು ಕವಿಗಳಿಗೆ ಸ್ಪೂರ್ತಿಯಾಗಿದ್ದಾರೆ, ಅವರ ಒಂದೊಂದು ನುಡಿಮುತ್ತುಗಳು ಜೀವನ ಸಂದೇಶ ಸಾರುತ್ತವೆ ಎಂದರು.

ಸನ್ಮಾನ:

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕ ಶಾಂತಾರಾಮ ಚಿಬುಲಕರ ಅವರನ್ನು ಸನ್ಮಾನಿಸಲಾಯಿತು

ಬಿಇಒ ಪ್ರಮೋದ ಮಹಾಲೆ, ಕೃಷಿ ಅಧಿಕಾರಿ ಪಿ.ಐ. ಮಾನೆ, ಮುಖ್ಯಾಧಿಕಾರಿ ಅಶೋಕ ಮಾನೆ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ವಾಲ್ಮೀಕಿ ಸಮಾಜದ ಪ್ರಮುಖರಾದ ಮಹೇಶ ಇಟಗಿ, ನಾರಾಯಣ ಕುರಿಗದ್ದಾ, ಅಬ್ಬಯ್ಯಾ ಮಾಸ್ರಮರಡಿ, ಬಸಮ್ಮಾ ನಾಯಕ, ಜಯಶ್ರೀ ಹಾಗೂ ಇತರರು ಇದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ವಾದ್ಯಮೇಳದೊಂದಿಗೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಯಿತು.